ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಯರಗೊಪ್ಪ ಗ್ರಾಮದಲ್ಲಿ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಯೋಗದಲ್ಲಿ ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೋಜನಾಧಿಕಾರಿಗಳು, ಧರ್ಮಸ್ಥಳ ಯೋಜನೆಯ ಜನಪರ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಇದೇ ವೇಳೆ ಧಾರವಾಡ ಪ್ರಾದೇಶಿಕ ಕಚೇರಿಯ ಕೆರೆ ಅಭಿಯಂತರರಾದ ನಿಂಗರಾಜ್ ಅವರು ಕೆರೆ ಸಮಿತಿಯ ರಚನೆ, ಅದರ ಜವಾಬ್ದಾರಿಗಳು ಹಾಗೂ ಯೋಜನೆಯಿಂದ ಈವರೆಗೆ ಯಶಸ್ವಿಯಾಗಿ ಹೂಳೆತ್ತಲಾದ ಕೆರೆಗಳ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯ ಮೇಲ್ವಿಚಾರಣೆಗಾಗಿ ಅಧಿಕೃತವಾಗಿ ಕೆರೆ ಸಮಿತಿಯನ್ನು ರಚಿಸಲಾಯಿತು.
ಗ್ರಾಮಸ್ಥರ ಪರವಾಗಿ ಮಾತನಾಡಿದ ಮಲ್ಲಿಕಾರ್ಜುನ್ ಅವರು, ಧರ್ಮಸ್ಥಳ ಯೋಜನೆಯು ಗ್ರಾಮೀಣ ಭಾಗದ ಜನರ ಏಳಿಗೆಗಾಗಿ ನೀಡುತ್ತಿರುವ ಕೊಡುಗೆ ಅಪಾರ. ಕೆರೆ ಹೂಳೆತ್ತುವ ಈ ಸತ್ಕಾರ್ಯಕ್ಕೆ ಗ್ರಾಮಸ್ಥರ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದರು.
ಬಸವರಾಜ ಹಲ್ಕಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗನಗೌಡ ಹಲ್ಕಿ, ಗ್ರಾಮದ ರೈತರು, ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಹಾಲಪ್ಪ ಮಿರ್ಜಿ ಕಾರ್ಯಕ್ರಮ ನಿರೂಪಿಸಿದರೆ, ರಿಯಾಜ್ ಸಾಹೇಬ ದರಗಾದ ವಂದನಾರ್ಪಣೆ ಮಾಡಿದರು.
