ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ಶಾಲಾ ವಿದ್ಯಾರ್ಥಿಗಳು ಕೊಳಚೆ ನೀರಿನಲ್ಲಿ ಊಟದ ತಟ್ಟೆ ತೊಳೆಯುತ್ತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ, ಜಮಖಂಡಿ ಬಿಇಓ ಅಶೋಕ್ ಕೆ. ಬಸನ್ನವರ ಪ್ರತಿಕ್ರಿಯೆ ನೀಡಿದ್ದಾರೆ. “ಈ ಘಟನೆಯ ಕುರಿತು ಈಗಾಗಲೇ ಶಿಕ್ಷಣ ಸಂಯೋಜಕರಿಂದ ಪರಿಶೀಲನೆ ನಡೆಸಲಾಗಿದ್ದು, ಫಿಲ್ಟರ್ನ ವೇಸ್ಟ್ ನೀರಿನ ಪೈಪ್ ಬಳಿ ವಿದ್ಯಾರ್ಥಿಗಳು ತಟ್ಟೆ ತೊಳೆಯುತ್ತಿರುವುದು ಕಂಡುಬಂದಿದೆ. ಶಾಲೆಯ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ, ಶಾಲಾ ಕಾಂಪೌಂಡ್ ಹೊರಗಿನ ಜಾಗದಲ್ಲಿ ಈ ರೀತಿ ಆಗುತ್ತಿರುವುದು ಮುಖ್ಯ ಶಿಕ್ಷಕರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರ ಉತ್ತರ ಬಂದ ಬಳಿಕ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಪಂಚಾಯತ್ ವತಿಯಿಂದ ಆ ಜಾಗವನ್ನು ಸರಿಪಡಿಸಲು ಸೂಚನೆ ನೀಡಲಾಗಿದ್ದು, ಒಂದು ವೇಳೆ ಅವರು ವಿಳಂಬ ಮಾಡಿದರೆ ಶಾಲಾ ಅನುದಾನದಲ್ಲೇ ವ್ಯವಸ್ಥೆ ಸರಿಪಡಿಸಿ ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

