ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರನ್ನು ‘ಅವಮಾನಿಸಿದ ಮತ್ತು ಅಗೌರವಿಸಿದ’ ಆರೋಪದ ಮೇಲೆ ಕೆಲವು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮಂಗಳವಾರ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದವು.


ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ನ್ಯಾಯಕ್ಕಾಗಿ ಒತ್ತಾಯಿಸಿದರು.
ಅಬಕಾರಿ ಇಲಾಖೆಯ ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯಗಳು ಮತ್ತು ಮಹಿಳೆಯರಿಗೆ ಅಸಮರ್ಪಕ ಭದ್ರತೆ ಕುರಿತು ರಾಜ್ಯ ಸರ್ಕಾರವನ್ನು ದೂಷಿಸಿದರು.ವಿಧಾನಸಭೆ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ಎಂಎಲ್ಸಿ ಸಿಟಿ ರವಿ, ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಿವೈ ವಿಜಯೇಂದ್ರ ಮಾತನಾಡಿ, ‘ಅಬಕಾರಿ ಸಚಿವರು ಮತ್ತು ಅವರ ಕುಟುಂಬ ಸದಸ್ಯರು ಭಾಗಿಯಾಗಿರುವ ₹6,000 ಕೋಟಿ ಹಗರಣದ ಬಗ್ಗೆ ಈಗಾಗಲೇ ಪುರಾವೆಗಳು ಹೊರಬಿದ್ದಿವೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲಿ ಈ ಬಗ್ಗೆ ಚರ್ಚಿಸಲು ಇಚ್ಛಿಸುತ್ತಿಲ್ಲ… ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವುದು ಇಡೀ ಹಗರಣಕ್ಕೆ ಏಕೈಕ ಉತ್ತರ. ಸಿದ್ದರಾಮಯ್ಯ ಸರ್ಕಾರ ಇಡೀ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ, ನಾಟಕ ಸೃಷ್ಟಿಸುತ್ತಿದೆ. ಸದನದ ಹೊರಗೆ ಮತ್ತು ಸದನದ ಒಳಗೆ, ನಾವು ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಲಿದ್ದೇವೆ’ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲುವಾದಿ ನಾರಾಯಣ ಸ್ವಾಮಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
