ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜೋಗುಳಭಾವಿ ಹತ್ತಿರ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕೆ ಬಂದಿದ್ದ ಕಾರು ಚಾಲಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರಾಯಬಾಗ ತಾಲೂಕಿನ ಬ್ಯಾಕೂಡ್ ಗ್ರಾಮದ ಚಾಲಕ, ಅಲ್ಲಿನ ನೋ ಪಾರ್ಕಿಂಗ್ ವಲಯದಲ್ಲಿ ಇತರ ವಾಹನಗಳು ನಿಂತಿರುವುದನ್ನು ನೋಡಿ ತನ್ನ ಕಾರನ್ನೂ ನಿಲ್ಲಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಏಕಾಏಕಿ ಕಾರಿಗೆ ಲಾಠಿಯಿಂದ ಬಡಿಯಲು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದ ಚಾಲಕನ ಮೇಲೆ ಸಿಪಿಐ, ಪಿಎಸ್‌ಐ ಹಾಗೂ ಕಾನ್ಸ್‌ಟೇಬಲ್‌ಗಳು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾಗ, “ಸರ್ ಬೈಬೇಡಿ” ಎಂದು ಮನವಿ ಮಾಡಿದರೂ ಕೇಳದ ಅಧಿಕಾರಿಗಳು, “ನಮಗೆ ಎದುರು ಮಾತನಾಡುತ್ತೀಯಾ?” ಎಂದು ಚಾಲಕನನ್ನು ಕೆಳಕ್ಕೆ ಉರುಳಿಸಿ ಮನಬಂದಂತೆ ಥಳಿಸಿದ್ದಾರೆ. ಹಲ್ಲೆಯ ವೇಳೆ ಪೊಲೀಸರು ಕಾರಿನ ಕೀಯಿಂದ ಚಾಲಕನ ಹೊಟ್ಟೆಯ ಭಾಗಕ್ಕೆ ಚುಚ್ಚಿ ಗಾಯಗೊಳಿಸಿದ್ದಾರೆ ಎಂದು ನೊಂದ ಚಾಲಕ ಆರೋಪಿಸಿದ್ದಾರೆ. ಈ ಅಮಾನವೀಯ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾನೂನು ರಕ್ಷಕರೇ ಭಕ್ಷಕರಾದರೇ ಎಂದು ಭಕ್ತಾದಿಗಳು ಪ್ರಶ್ನಿಸುತ್ತಿದ್ದಾರೆ.
ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ತನ್ನ ಮೇಲೆ ವಿನಾಕಾರಣ ಹಲ್ಲೆ ನಡೆಸಿ ದೈಹಿಕವಾಗಿ ಹಿಂಸೆ ನೀಡಿದ ಪೊಲೀಸರಿಂದ ತನಗೆ ಸೂಕ್ತ ನ್ಯಾಯ ಮತ್ತು ಪರಿಹಾರ ಸಿಗಬೇಕೆಂದು ಚಾಲಕ ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ. ಸ್ಥಳೀಯವಾಗಿ ಪೊಲೀಸರ ಈ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
