ರಾಜ್ಯದ ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿರುವ ವಿರೋಧ ಪಕ್ಷ ಬಿಜೆಪಿ, ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ರಾಜೀನಾಮೆ ನೀಡಬೇಕು ಎಂದು ಶುಕ್ರವಾರ ವಿಧಾನಸಭೆಯಲ್ಲಿ ಆಗ್ರಹಿಸಿದೆ.
ಇಂದು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮದ್ಯ ಪರವಾನಗಿ ಮೂಲಕ ಸಂಗ್ರಹಿಸಲಾದ ಲಂಚವನ್ನು ಅಸ್ಸಾಂ ಮತ್ತು ಕೇರಳ ಸೇರಿದಂತೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಚುನಾವಣಾ ವೆಚ್ಚಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ನಿಗದಿತ ನಿಯಮಗಳನ್ನು ಉಲ್ಲಂಘಿಸಿ ಮದ್ಯ ಪರವಾನಗಿಗಳನ್ನು “ಹರಾಜು” ಮಾಡಲಾಗುತ್ತಿದೆ ಎಂದು ಆರ್ ಅಶೋಕ್ ಆರೋಪಿಸಿದರು.

ಸ್ಪೀಕರ್ ಯು ಟಿ ಖಾದರ್ ಅವರು ಕಾಂಗ್ರೆಸ್ ಶಾಸಕ ಎ ಎಸ್ ಪೊನ್ನಣ್ಣ ಅವರನ್ನು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವಂತೆ ಕೇಳಿದ ನಂತರ ಈ ಅಬಕಾರಿ ಹಗರಣ ಸದನದಲ್ಲಿ ಘರ್ಷಣೆಗೆ ಕಾರಣವಾಯಿತು.ಅಶೋಕ್ ಮತ್ತು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಒತ್ತಾಯದ ಮೇರೆಗೆ, ಸ್ಪೀಕರ್ ಅಶೋಕ್ ಅವರಿಗೆ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಿದರು.
ಮತ್ತೊಂದು ನಿಯಮದ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿದ್ದರೂ, ಬಿಜೆಪಿ ಶಾಸಕರು ಚರ್ಚೆಗೆ ಒತ್ತಾಯಿಸುತ್ತಲೇ ಇದ್ದರು.ಸ್ಪೀಕರ್ ನಿಗದಿತ ಕಲಾಪವನ್ನು ಮುಂದುವರಿಸುತ್ತಾ, ಕಾಂಗ್ರೆಸ್ ಶಾಸಕ ಪೊನ್ನಣ್ಣ ಅವರಿಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮಂಡಿಸಲು ಅವಕಾಶ ನೀಡುತ್ತಿದ್ದಂತೆ, ಆಡಳಿತ ಪಕ್ಷದ ಶಾಸಕ ಪ್ರದೀಪ್ ಈಶ್ವರ್ ಅವರು ಇದನ್ನು ಅನುಮೋದಿಸಿದರು. ಈ ವೇಳೆ ಬಿಜೆಪಿ ಶಾಸಕರು, ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಇದರಿಂದಾಗಿ ಸಭಾಪತಿಗಳು ಸದನವನ್ನು 15 ನಿಮಿಷಗಳ ಕಾಲ ಮುಂದೂಡಿ ಮತ್ತೇ ಆರಂಭಿಸಿದರು. ಈ ವೇಳೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಸದನದಲ್ಲಿ ಈ ರೀತಿ ಸದ್ದು ಗದ್ದಲ ಉಂಟು ಮಾಡುವುದು ಸರಿಯಲ್ಲ ಎಂದರು. ಆದರೂ ಪ್ರತಿಭಟನೆ ಸದ್ದು ಗದ್ದಲಗಳು ಹೆಚ್ಚಾದವು. ಈ ವೇಳೆ ಸಭಾಪತಿ ಧರಣಿ ಕುಳಿತು ರಾಜೀನಾಮೆ ಪಡೆದಿದ್ದು, ಇತಿಹಾಸದಲ್ಲೇ ಇಲ್ಲ ಎಂದರು. ಕೊನೆಗೆ ಸಭಾಪತಿ ಸದನವನ್ನು ಜನವರಿ 28 ರ ವರೆಗೆ ಮುಂದೂಡಿದರು.
