ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಸೇತುವೆಯ ಬಳಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮಲಪ್ರಭಾ ನದಿಯ ದಂಡೆಯಲ್ಲಿ ಈ ಮೃತದೇಹ ಕಂಡುಬಂದಿದ್ದು, ಗುರುತು ಪತ್ತೆಗಾಗಿ ನಂದಗಡ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.

ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಮುನವಳ್ಳಿ ಮಲಪ್ರಭಾ ನದಿ ಸೇತುವೆ ಹತ್ತಿರ ಸುಮಾರು 45 ರಿಂದ 50 ವರ್ಷ ವಯಸ್ಸಿನ ಪುರುಷನ ಶವ ಪತ್ತೆಯಾಗಿದೆ. ಮೃತದೇಹದ ಸೊಂಟದಲ್ಲಿ ಉಡುದಾರ ಮತ್ತು ತಾಯಿತ ಇರುವುದು ಕಂಡುಬಂದಿದೆ. ಸ್ಥಳಕ್ಕೆ ಧಾವಿಸಿದ ನಂದಗಡ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲದ ಕಾರಣ, ಅವರ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿದೆ. ಈ ವ್ಯಕ್ತಿಯ ಬಗ್ಗೆ ಅಥವಾ ಅವರ ಕುಟುಂಬದ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ತಕ್ಷಣವೇ ನಂದಗಡ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
