ಬಾಗಲಕೋಟೆಯಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಸ್ತಿಗಾಗಿ ಸ್ವಂತ ಚಿಕ್ಕಮ್ಮನನ್ನೇ ಕತ್ತು ಹಿಸುಕಿ ಸಾಯಿಸಿ, ಏನೂ ಅರಿಯದವರಂತೆ ನಾಟಕವಾಡಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಜನವರಿ 14ರಂದು ನಡೆದಿದ್ದ ಯಮನವ್ವ (40) ಎಂಬುವವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಸಾವಳಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇವಲ 1 ಎಕರೆ 8 ಗುಂಟೆ ಆಸ್ತಿಗಾಗಿ ಮೃತ ಮಹಿಳೆಯ ತಂಗಿಯ ಮಗ ಶರಣಗೌಡ ಮತ್ತು ಆತನ ಸಂಬಂಧಿ ಬಸಪ್ಪ ಎಂಬುವವರು ಸೇರಿ ಈ ಕೃತ್ಯ ಎಸಗಿದ್ದಾರೆ. ತಂದೆಯ ತಿಥಿ ಕಾರ್ಯಕ್ಕೆಂದು ಬಂದಿದ್ದ ಇವರು, ರಾತ್ರಿ ಹೊಟ್ಟೆ ನೋವಿನ ನಾಟಕವಾಡಿ ಚಿಕ್ಕಮ್ಮನನ್ನು ತಮ್ಮ ಕೋಣೆಗೆ ಕರೆಸಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ಬಳಿಕ ಆರೋಪಿಗಳು ಹಾರ್ಟ್ ಅಟ್ಯಾಕ್ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಅಷ್ಟೇ ಅಲ್ಲದೆ, ಮೃತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಶ್ರೀಶೈಲ ಎಂಬಾತನ ಮೇಲೆ ಕೊಲೆ ಆರೋಪ ಹೊರೆಸಿ ಪೊಲೀಸರನ್ನು ದಾರಿ ತಪ್ಪಿಸಲು ಸ್ಕೆಚ್ ಹಾಕಿದ್ದರು. ತಾನೇ ಮುಂದೆ ನಿಂತು ದೂರು ನೀಡಿದ್ದ ಶರಣಗೌಡನ ಅತಿಯಾದ ಓಡಾಟ ಪೊಲೀಸರಲ್ಲಿ ಅನುಮಾನ ಮೂಡಿಸಿತ್ತು. ವಿಚಾರಣೆ ವೇಳೆ ಶ್ರೀಶೈಲನ ಹೇಳಿಕೆ ಮತ್ತು ಶರಣಗೌಡನ ದ್ವಂದ್ವ ವರ್ತನೆಯಿಂದ ಸತ್ಯ ಹೊರಬಿದ್ದಿದ್ದು, ಜಮಖಂಡಿ ಸಿಪಿಐ ಮಲ್ಲಿಕಾರ್ಜುನ ಮಡ್ಡಿ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಜೈಲಿಗಟ್ಟಿದೆ.
