Bagalkot

ಮುಧೋಳದಲ್ಲಿ ರೈತರು Vs ಕಾರ್ಖಾನೆ ಮಾಲೀಕರ ವಾರ್: 17 ರೈತರಿಗೆ ಕೋರ್ಟ್ ನೋಟಿಸ್ ಬೆನ್ನಲ್ಲೇ ಪ್ರತಿಭಟನೆಗೆ ಕರೆ!

Share

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಹಗ್ಗಜಗ್ಗಾಟ ಹೊಸ ತಿರುವು ಪಡೆದುಕೊಂಡಿದೆ. ಪ್ರತಿಭಟನೆಗೆ ಬ್ರೇಕ್ ಹಾಕಲು ಕಾರ್ಖಾನೆ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದು, ಈಗ ಅನ್ನದಾತರ ಆಕ್ರೋಶ ಕಟ್ಟೆಯೊಡೆದಿದೆ.

ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಒಡೆತನದ ಸಿದ್ದಾಪುರ ಬಳಿಯ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಸುತ್ತಮುತ್ತ ಪ್ರತಿಭಟನೆ ನಡೆಸದಂತೆ ನ್ಯಾಯಾಲಯ ತಡೆ ನೀಡಿದೆ. ಕಾರ್ಖಾನೆಯ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಹೋರಾಟ ನಡೆಸದಂತೆ ಸುಮಾರು 17 ಜನ ರೈತ ಮುಖಂಡರಿಗೆ ಕೋರ್ಟ್ ನೋಟಿಸ್ ಜಾರಿಯಾಗಿದೆ. ಕಾರ್ಖಾನೆ ಆಡಳಿತ ಮಂಡಳಿಯು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಮುಧೋಳ ಭಾಗದ ರೈತರನ್ನು ಕೆರಳಿಸುವಂತೆ ಮಾಡಿದೆ.
ಈ ನೋಟಿಸ್ ಬೆನ್ನಲ್ಲೇ ಮುಧೋಳದ ಜಿಎಲ್ ಬಿಸಿ ಐಬಿಯಲ್ಲಿ ತುರ್ತು ಸಭೆ ನಡೆಸಿದ ರೈತರು, ಕಾರ್ಖಾನೆ ಮಾಲೀಕರ ವಿರುದ್ಧ ಉಗ್ರ ಹೋರಾಟಕ್ಕೆ ನಿರ್ಧರಿಸಿದ್ದಾರೆ. ಇಂದು ಶಿರೋಳ ಕ್ರಾಸ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ಪ್ರಭುಲಿಂಗೇಶ್ವರ ಕಾರ್ಖಾನೆಗೆ ಸಾಗಿಸುವ ಕಬ್ಬಿನ ಟ್ರ್ಯಾಕ್ಟರ್‌ಗಳನ್ನು ತಡೆದು ಆಕ್ರೋಶ ಹೊರಹಾಕಲು ರೈತ ಮುಖಂಡರು ಕರೆ ನೀಡಿದ್ದಾರೆ. ಇದರಿಂದಾಗಿ ಮುಧೋಳ ಮತ್ತು ಜಮಖಂಡಿ ಭಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Tags:

error: Content is protected !!