Kagawad

ಮಕ್ಕಳೇ ನಿಜವಾದ ಆಸ್ತಿ, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ: ಹಿರಿಯ ನ್ಯಾಯವಾದಿ ಕೆ.ಎ. ವಣಜೋಳ ಕರೆ

Share

“ಅಧಿಕ ಹಣ ಗಳಿಸಿದವನನ್ನು ಆಸ್ತಿವಂತ ಎನ್ನಬಹುದು, ಆದರೆ ಗುಣಮಟ್ಟದ ಶಿಕ್ಷಣ ಪಡೆದವನೇ ನಿಜವಾದ ಶ್ರೀಮಂತ. ಶಿಕ್ಷಣದಿಂದ ಬರುವ ಬುದ್ಧಿವಂತಿಕೆಗೆ ಬೆಲೆ ಕಟ್ಟಲು ಅಸಾಧ್ಯ. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳ ಹೆಸರಿನಲ್ಲಿ ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೇ ಸತ್ಪ್ರಜೆಗಳನ್ನಾಗಿ ರೂಪಿಸಿ ಆಸ್ತಿಯನ್ನಾಗಿ ಮಾಡಬೇಕು” ಎಂದು ಅಥಣಿ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಕೆ.ಎ. ವಣಜೋಳ ಹೇಳಿದರು.

ತಾಲ್ಲೂಕಿನ ಉಗಾರ ಬದ್ರುಕ ಗ್ರಾಮದ ಶ್ರೀ ಪದ್ಮಾವತಿ ಎಜುಕೇಶನ್ ಟ್ರಸ್ಟ್, ಶ್ರೀ ಜೆ.ಎಲ್. ಚೌಗುಲೆ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಶ್ರೀ ಪಾಸಗೌಡ ಪಾಟೀಲ ಪ್ರೌಢಶಾಲೆಯ 28ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಅನ್ನಾಸಾಹೇಬ ನಂದಗಾವೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಪ್ರಗತಿಯನ್ನು ವಿವರಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ರಾವಸಾಹೇಬ ಹೊನಮಾನೆ ಅವರು ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಮಾಹಿತಿ ನೀಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಜಯ ಅಜಿತ ಖವಟಕೊಪ್ಪ (96.80%), ಪ್ರಿಯಂಕಾ ಅಪ್ಪಾಸಾಬ ಕದಮ (95.84%) ಹಾಗೂ ಸಾರ್ಥಕ ರಾವಸಾಬ ಹೊನಮಾನೆ (90.72%) ಇವರನ್ನು ಅತಿಥಿಗಳು ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ವೇಳೆ ಪೋಷಕರು ಶಾಲೆಯ ಶಿಕ್ಷಕ ವೃಂದವನ್ನು ಸನ್ಮಾನಿಸಿದರು.

ಸಂಸ್ಥೆಯ ಸಿಇಓ ಮನೋಹರ ಚೌಗುಲೆ ಸಂಸ್ಥೆಯ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷರಾದ ಶೀತಲಗೌಡ ಪಾಟೀಲ ಮತ್ತು ವೃಷಭ ಪಾಟೀಲ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ಶೇಡಬಾಳ ಅರ್ಬನ್ ಬ್ಯಾಂಕ್ ನಿರ್ದೇಶಕ ಎಲ್.ಜಿ. ಪಾಟೀಲ, ನಿವೃತ್ತ ಶಿಕ್ಷಕ ಆನಂದ ಶಿಂದೆ, ಜೈನ ಶಿಕ್ಷಣ ಸಂಸ್ಥೆಗಳ ಮಹಾಮಂಡಳದ ಕಾರ್ಯದರ್ಶಿ ಜಿನ್ನಪ್ಪಾ ನಾದಂನಿ, ನಿರ್ದೇಶಕರಾದ ರಾಜೇಂದ್ರ ಚಿಂಚನವಾಡೆ, ಸುರೇಂದ್ರ ಕುಸನಾಳೆ, ಶಾಂತಿನಾಥ ಹೊಸವಾಡೆ, ಶ್ರೀನಿಕ ಚೌಗೂಲೆ, ದೀಪಕ್ ಪಾಟೀಲ, ಮಹಾವೀರ ವಸವಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Tags:

error: Content is protected !!