ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದಲ್ಲಿ ಕೌಟುಂಬಿಕ ಕಲಹವೊಂದು ವಿಕೋಪಕ್ಕೆ ಹೋಗಿ, ಪತಿಯೇ ತನ್ನ ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮಕ್ಕಳಾಗಿಲ್ಲ ಎಂಬ ಬೇಸರ ಹಾಗೂ ತವರು ಮನೆಗೆ ಹೋಗುವ ವಿಚಾರದಲ್ಲಿ ನಡೆದ ಜಗಳವೇ ಈ ಭೀಕರ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ನೇಗಿನಹಾಳ ಗ್ರಾಮದಲ್ಲಿ ಜನವರಿ 21ರ ಮಧ್ಯರಾತ್ರಿ ಘೋರ ಘಟನೆಯೊಂದು ಸಂಭವಿಸಿದೆ. ಮೃತ ಮಹಿಳೆಯನ್ನು 21 ವರ್ಷದ ರಾಜೇಶ್ವರಿ ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ಫಕ್ಕಿರಪ್ಪ ಬಸಪ್ಪ ಗಿಲಕ್ಕನವರ (28) ಎಂಬಾತನೇ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾನೆ. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರವಾಗಿ ರಾಜೇಶ್ವರಿ ಪ್ರತಿನಿತ್ಯ ಪತಿಯೊಂದಿಗೆ ಜಗಳವಾಡುತ್ತಿದ್ದು, ಇದು ಫಕ್ಕಿರಪ್ಪನಿಗೆ ತೀವ್ರ ಮಾನಸಿಕ ಕಿರಿಕಿರಿ ಉಂಟುಮಾಡಿತ್ತು ಎನ್ನಲಾಗಿದೆ.
ಘಟನೆಯ ದಿನ ರಾಜೇಶ್ವರಿ ತನ್ನ ಗಾಯಗೊಂಡ ತಮ್ಮನನ್ನು ನೋಡಲು ತವರು ಮನೆಗೆ ಹೋಗುವುದಾಗಿ ಹಠ ಹಿಡಿದಿದ್ದಳು. ಆದರೆ ಜಮೀನಿನಲ್ಲಿ ಕೆಲಸ ಜಾಸ್ತಿ ಇದೆ ಎಂದು ಫಕ್ಕಿರಪ್ಪ ತಡೆದಿದ್ದರಿಂದ ದಂಪತಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಪತಿ ಫಕ್ಕಿರಪ್ಪ, ರಾತ್ರಿ ರಾಜೇಶ್ವರಿ ಮಲಗಿದ್ದಾಗ ಹಗ್ಗದಿಂದ ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸದ್ಯ ಬೈಲಹೊಂಗಲ ಪೊಲೀಸರು ಕಲಂ 103(1) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಿಂದೆ ಜಗಳವಾದಾಗ ಬುದ್ಧಿವಾದ ಹೇಳಿ ಆಕೆಯನ್ನು ಬಿಟ್ಟು ಬಂದಿದ್ದೇವು. ಆದರೇ ಈ ಬಾರಿ ಈ ರೀತಿ ಮಾಡಿದ್ದಾರೆ. ಸ್ವಲ್ಪ ದಿನ ಚೆನ್ನಾಗಿರುತ್ತಿದ್ದರು. ಮತ್ತೇ ಅದೇ ರೀತಿ ಕಿರುಕುಳ ಶುರುವಾಗುತ್ತಿತ್ತು ಎಂದು ತಾಯಿ ತನ್ನ ಅಳಲನ್ನು ತೋಡಿಕೊಂಡಳು.
ಹೃದಯಾಘಾತವಾಗಿದೆ ಎಂದು ಹೇಳಿ ಮನೆಗೆ ಕೆರೆಯಿಸಿಕೊಂಡಿದ್ದಾರೆ. ಹೋಗಿ ನೋಡಿದಾಗ ಆಕೆಯ ಗಂಟಲೂ ಊದಿಕೊಂಡಿತ್ತು. ಕತ್ತಿಗೆ ಹಗ್ಗದ ಗುರುತಿತ್ತು. ಮದುವೆಯಾಗಿ 2-3 ವರ್ಷವಾಗಿವೆ. ಮಕ್ಕಳಾಗಿಲ್ಲವೆಂದರೇ ಮೊದಲೂ ಆಸ್ಪತ್ರೆಗೆ ಹೋಗಬೇಕಿತ್ತು ಎಂದು ಮೃತಳ ಸಂಬಂಧಿಕರು ಹೇಳಿದ್ದು ಹೀಗೆ.
