ಬಾದಾಮಿ ‘ಚಾಲುಕ್ಯ ಉತ್ಸವ’ಕ್ಕೆ ಕ್ಷಣಗಣನೆ
ಇಂದು ಸಂಜೆ ಉತ್ಸವಕ್ಕೆ ಚಾಲನೆ ನೀಡಲಿರುವ ಸಿಎಂ ಸಿದ್ಧರಾಮಯ್ಯ
ಮೂರು ದಿನಗಳ ಕಾಲ ನಡೆಯಲಿರುವ ಉತ್ಸವ
ಜ.20ರಂದು ಪಟ್ಟದಕಲ್ಲು ಮತ್ತು 21ರಂದು ಐಹೊಳೆಯಲ್ಲಿ ಸಂಭ್ರಮ
ಐತಿಹಾಸಿಕ ಹಿನ್ನೆಲೆಯ ಬಾದಾಮಿಯಲ್ಲಿ ಹತ್ತು ವರ್ಷಗಳ ಬಳಿಕ ‘ಚಾಲುಕ್ಯ ಉತ್ಸವ’ಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
ನಂದಗಡದಿಂದ ಹೆಲಿಕಾಪ್ಟರ್ ಮೂಲಕ ಸಂಜೆ 4:15ಕ್ಕೆ ಬಾದಾಮಿಗೆ ಆಗಮಿಸಲಿರುವ ಸಿಎಂ, ಪಟ್ಟಣದಲ್ಲಿ ವೀರಪುಲಿಕೇಶಿ ಪುತ್ಥಳಿ ಶಿಲಾನ್ಯಾಸ ನೆರವೇರಿಸಿ, ನಂತರ ಬನಶಂಕರಿ ದೇವಿಯ ದರ್ಶನ ಪಡೆಯಲಿದ್ದಾರೆ. ಸಂಜೆ 6:30ಕ್ಕೆ ಎಪಿಎಂಸಿ ಮೈದಾನದಲ್ಲಿ ನಿರ್ಮಾಣಗೊಂಡಿರುವ ಭವ್ಯ ‘ಇಮ್ಮಡಿ ಪುಲಕೇಶಿ’ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಉತ್ಸವವು ಇತಿಹಾಸದ ಪುಟಗಳನ್ನು ಸ್ಮರಿಸುವಂತಿದೆ. ಮೊದಲ ದಿನ ಬಾದಾಮಿಯಲ್ಲಿ ಕಾರ್ಯಕ್ರಮ ನಡೆದರೆ, ಜನವರಿ 20ರಂದು ಪಟ್ಟದಕಲ್ಲು ಮತ್ತು 21ರಂದು ಐಹೊಳೆಯಲ್ಲಿ ಸಂಭ್ರಮ ಮುಂದುವರಿಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಹಾಗೂ ಸ್ಥಳೀಯ ಶಾಸಕರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಲಿದ್ದಾರೆ. ಮೊದಲ ದಿನದ ಕಾರ್ಯಕ್ರಮ ಮುಗಿಸಿ ರಾತ್ರಿ 8 ಗಂಟೆಗೆ ಮುಖ್ಯಮಂತ್ರಿಗಳು ರಸ್ತೆ ಮೂಲಕ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

