Bailahongala

ಇನಾಮದಾರ ಸಕ್ಕರೆ ಕಾರ್ಖಾನೆ ದುರಂತ: 1 ಕೋಟಿ ರೂ. ಪರಿಹಾರಕ್ಕೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆಯಿಂದ ಬೃಹತ್ ಪ್ರತಿಭಟನೆ

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮರಕುಂಬಿ ಗ್ರಾಮದ ಬಳಿ ಇರುವ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟ ಪ್ರಕರಣ ಈಗ ಹೋರಾಟದ ರೂಪ ಪಡೆದಿದೆ. 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ಕಾರ್ಖಾನೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ದುರಂತದಲ್ಲಿ ಸಾವನ್ನಪ್ಪಿದ ಎಂಟು ಮಂದಿ ಕಾರ್ಮಿಕರ ಕುಟುಂಬಗಳಿಗೆ ಕಾರ್ಖಾನೆ ಆಡಳಿತ ಮಂಡಳಿ ಘೋಷಿಸಿರುವ 20 ಲಕ್ಷ ರೂಪಾಯಿ ಪರಿಹಾರವು ಅತ್ಯಲ್ಪವಾಗಿದ್ದು, ಇದನ್ನು ವಿರೋಧಿಸಿ ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ಕಾರ್ಖಾನೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮೃತಪಟ್ಟ ಬಡ ಕಾರ್ಮಿಕರ ಕುಟುಂಬಗಳ ಭವಿಷ್ಯದ ದೃಷ್ಟಿಯಿಂದ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರನ್ನು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಪದಾಧಿಕಾರಿಗಳು ಕಾರ್ಖಾನೆ ಮಾಲೀಕರ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ದುರಂತ ನಡೆದು ಇಷ್ಟು ದಿನಗಳಾದರೂ ಮಾಲೀಕರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ” ಎಂದು ಕಿಡಿಕಾರಿದರು. ಕೇವಲ 20 ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಳ್ಳಲು ಮುಂದಾಗಿರುವ ಮಾಲೀಕರ ಕ್ರಮ ಖಂಡನೀಯವಾಗಿದ್ದು, ಕೂಡಲೇ ಹೆಚ್ಚಿನ ಪರಿಹಾರ ಘೋಷಿಸದಿದ್ದರೆ ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

 

Tags:

error: Content is protected !!