ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ದೇವಲತ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಭಿನ್ನವಾದ “ಮಕ್ಕಳ ಸಂತೆ” ಮತ್ತು ಆಹಾರ ಮೇಳವನ್ನು ಆಯೋಜಿಸಲಾಗಿತ್ತು.


ಕೇವಲ ಪುಸ್ತಕದ ಪಾಠಕ್ಕೆ ಸೀಮಿತವಾಗದೆ, ಮಕ್ಕಳಿಗೆ ವ್ಯವಹಾರ ಜ್ಞಾನ ಮತ್ತು ಸ್ವಾವಲಂಬನೆಯ ಪಾಠವನ್ನು ಪ್ರಾಯೋಗಿಕವಾಗಿ ಕಲಿಸುವುದು ಈ ಸಂತೆಯ ಮುಖ್ಯ ಉದ್ದೇಶವಾಗಿತ್ತು. ವಿದ್ಯಾರ್ಥಿಗಳೇ ಸ್ವತಃ ತಯಾರಿಸಿದ ರುಚಿಕರವಾದ ಗುಲಾಬ್ ಜಾಮೂನ್, ಪಾನಿಪುರಿ, ಗಿರ್ಮಿಟ್, ಬಜ್ಜಿ, ಕೇಕ್ ಮತ್ತು ಚಿಗಳಿ ಸೇರಿದಂತೆ ವಿವಿಧ ಖಾದ್ಯಗಳ ಮಳಿಗೆಗಳು ಗ್ರಾಹಕರನ್ನು ಸೆಳೆದವು.

ಈ ಸಂತೆಯಲ್ಲಿ ಮಕ್ಕಳು ತಾವೇ ಬಂಡವಾಳ ಹೂಡಿ, ವ್ಯಾಪಾರ ನಡೆಸಿ, ಲಾಭ-ನಷ್ಟದ ಲೆಕ್ಕಾಚಾರವನ್ನು ಕಣ್ಣಾರೆ ಕಂಡರು. ಅದರಲ್ಲೂ ಪಾನಿಪುರಿ ಸ್ಟಾಲ್ ಹಾಕಿದ್ದ ವಿದ್ಯಾರ್ಥಿಗಳು ಉತ್ತಮ ಲಾಭ ಗಳಿಸಿ ಸಂಭ್ರಮಿಸಿದರು. “ಇದು ಕೇವಲ ತಿನ್ನುವ ಸಂತೆಯಲ್ಲ, ಬದಲಾಗಿ ಮಕ್ಕಳು ಭವಿಷ್ಯದಲ್ಲಿ ಸ್ವಂತ ಕಾಲ ಮೇಲೆ ನಿಲ್ಲಲು ಬೇಕಾದ ಆತ್ಮವಿಶ್ವಾಸ ತುಂಬುವ ವೇದಿಕೆ” ಎಂದು ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಯ ಮಕ್ಕಳಲ್ಲಿರುವ ಪ್ರತಿಭೆ ಮತ್ತು ಶ್ರಮವನ್ನು ಕಂಡ ಸ್ಥಳೀಯರು ಮಕ್ಕಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಈ ಸಂತೆ ಸಾಕ್ಷಿಯಾಯಿತು.
