DEATH

ಕುಲಗೋಡ ವ್ಯಾಪ್ತಿಯಲ್ಲಿ ಬೈಕ್ ಅಪಘಾತ; ಮಹಾರಾಷ್ಟ್ರ ಮೂಲದ ಸವಾರ ಸ್ಥಳದಲ್ಲೇ ಸಾವು

Share

ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ಮೋಟಾರ್ ಸೈಕಲ್ ಸವಾರನೊಬ್ಬ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಬೈರನಟ್ಟಿ ಗ್ರಾಮದ ಹದ್ದಿಯಲ್ಲಿ ನಡೆದಿದೆ.
ಮಹಾರಾಷ್ಟ್ರ ರಾಜ್ಯದ ಬೀಡ್ ಜಿಲ್ಲೆಯ ದಾರೂರ ತಾಲ್ಲೂಕಿನ ಅಮಲಾ ಗ್ರಾಮದ ನಿವಾಸಿ ವಿಕಾಸ ಜಾಲೇಂದರ ವಾರಕಡ (35) ಮೃತಪಟ್ಟ ದುರ್ದೈವಿ. ಇವರು ಜನವರಿ 13ರಂದು ರಾತ್ರಿ ಸುಮಾರು 9:30 ಗಂಟೆಗೆ ತಮ್ಮ ದ್ವಿಚಕ್ರ ವಾಹನದ ಮೂಲಕ ಲಕ್ಷ್ಮೀಶ್ವರದ ಕಡೆಗೆ ಪ್ರಯಾಣಿಸುತ್ತಿದ್ದರು. ಬೈರನಟ್ಟಿ-ಲಕ್ಷ್ಮೀಶ್ವರ ರಸ್ತೆಯ ಗುಂಡು ಉಂದರಿ ಎಂಬುವವರ ಜಮೀನಿನ ಬಳಿ ಬಂದಾಗ, ರಸ್ತೆಯ ಕಡೆಗೆ ಗಮನ ಕೊಡದೇ ಅತಿ ವೇಗವಾಗಿ ಚಲಿಸಿದ ಪರಿಣಾಮ ಬೈಕ್ ರಸ್ತೆ ಬದಿಯ ತೆಗ್ಗಿಗೆ ಬಿದ್ದಿದೆ. ತಲೆ ಮತ್ತು ಮುಖಕ್ಕೆ ತೀವ್ರ ಸ್ವರೂಪದ ಗಾಯಗಳಾದ ಕಾರಣ ವಿಕಾಸ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಮೃತರ ಪತ್ನಿ ಶ್ರೀಮತಿ ಸುರೇಖಾ ವಿಕಾಸ ವಾರಕಡ ಅವರು ನೀಡಿದ ದೂರಿನ ಮೇರೆಗೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಹಿಂಬದಿಯ ಸವಾರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗೋಕಾಕ ತಾಲ್ಲೂಕಿನ ಮಮದಾಪೂರ ಗ್ರಾಮದ ಹದ್ದಿಯಲ್ಲಿ ನಡೆದಿದೆ.
ಘಟನೆಯ ವಿವರ: ಕನಸಗೇರಿ ಗ್ರಾಮದ ನಿವಾಸಿ ಸಿದ್ರಾಯಪ್ಪ ಸಿದ್ದಪ್ಪ ಜಡಗಪ್ಪಗೋಳ (25) ಮೃತಪಟ್ಟ ಯುವಕ. ಜನೆವರಿ 13ರಂದು ಸಂಜೆ 7:30ರ ಸುಮಾರಿಗೆ ಸಿದ್ರಾಯಪ್ಪ ಅವರು ತಮ್ಮ ಸಂಬಂಧಿ ಮುಕುಂದ ಯರಗುದ್ರಿ ಅವರ ಬೈಕ್ ಹಿಂಬದಿಯಲ್ಲಿ ಕುಳಿತು ದುಂಡಾನಟ್ಟಿ ಕಡೆಗೆ ಹೊರಟಿದ್ದರು. ಈ ವೇಳೆ ಗೋಕಾಕ ಕಡೆಯಿಂದ ಯರಗಟ್ಟಿ ಕಡೆಗೆ ಅತಿ ವೇಗವಾಗಿ ಬಂದ ಮತ್ತೊಂದು ಬೈಕ್ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಸಿದ್ರಾಯಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಗೋಕಾಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಎರಡೂ ಬೈಕ್ ಸವಾರರು ಹಾಗೂ ಇನ್ನೋರ್ವ ಹಿಂಬದಿ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗೋಕಾಕಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:

error: Content is protected !!