ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಆಶಯದೊಂದಿಗೆ, ಕಿತ್ತೂರು ತಾಲೂಕಿನ ಕುಲುಮನಟ್ಟಿ ಗ್ರಾಮದಲ್ಲಿ ನೂತನ ‘ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ’ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 22 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸುಸಜ್ಜಿತ ಶಾಲಾ ಸಂಕೀರ್ಣ ತಲೆಎತ್ತಲಿದೆ. ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ಕುಲುಮನಟ್ಟಿ ಗ್ರಾಮದ 8 ಎಕರೆ ವಿಸ್ತೀರ್ಣದ ಜಾಗದಲ್ಲಿ ಶಾಲಾ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕ್ಷೇತ್ರದಲ್ಲಿ ಸುಸಜ್ಜಿತ ವಸತಿ ಶಾಲೆಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಬಾಡಿಗೆ ಕಟ್ಟಡಗಳಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಬೃಹತ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಾರ್ಮಿಕರ ಮಕ್ಕಳಿಗಾಗಿ ಮತ್ತೊಂದು ವಸತಿ ಶಾಲೆ ನಿರ್ಮಿಸಲು ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಲಗೋಡ ಪಾಟೀಲ್, ಶಿಕ್ಷಣಾಧಿಕಾರಿ ಸಿ.ವೈ. ತುಬಾಕದ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವಸತಿ ಶಾಲೆಯು ಪೂರ್ಣಗೊಂಡ ನಂತರ ಕಿತ್ತೂರು ಕ್ಷೇತ್ರದ ನೂರಾರು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯ ದೊರೆಯಲಿದ್ದು, ಶೈಕ್ಷಣಿಕ ಕ್ರಾಂತಿಗೆ ಇದು ಸಾಕ್ಷಿಯಾಗಲಿದೆ.
