ರಾಜ್ಯದಲ್ಲಿ ದ್ವೇಷ ಭಾಷಣ ತಡೆ ಮಸೂದೆ ಕುರಿತ ವಿವಾದ ಹಾಗೂ ಬಿಜೆಪಿಯ ಪಾದಯಾತ್ರೆ ಹಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ದ್ವೇಷ ಭಾಷಣದ ವಿರುದ್ಧದ ಮಸೂದೆಯನ್ನು ಸದನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದ್ದು, ಈ ಕುರಿತು ರಾಜ್ಯಪಾಲರು ಯಾವುದೇ ತಿದ್ದುಪಡಿ ಸೂಚಿಸಿಲ್ಲ ಅಥವಾ ಮಸೂದೆಯನ್ನು ಹಿಂತಿರುಗಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯಪಾಲರು ಈವರೆಗೆ ಮಸೂದೆಯನ್ನು ಅನುಮೋದಿಸಿಲ್ಲ ನಿಜ, ಆದರೆ ಅವರು ಕರೆದಾಗಲೆಲ್ಲಾ ನಾನು ಖುದ್ದಾಗಿ ಹೋಗಿ ಮಸೂದೆಯ ಅವಶ್ಯಕತೆಯ ಬಗ್ಗೆ ವಿವರಿಸಲು ಸಿದ್ಧನಿದ್ದೇನೆ” ಎಂದು ತಿಳಿಸಿದರು. ಬಳ್ಳಾರಿ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಪಾದಯಾತ್ರೆ ನಡೆಸಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ಅವರನ್ನು ತಡೆಯುವವರು ಯಾರು? ಅವರು ಮಾಡಲಿ” ಎಂದು ಸವಾಲು ಹಾಕಿದರು. ತಮ್ಮ ಅವಧಿಯ ಪಾದಯಾತ್ರೆಯನ್ನು ನೆನಪಿಸಿಕೊಂಡ ಅವರು, “ನಾವು ಅಕ್ರಮ ಗಣಿಗಾರಿಕೆಯ ವಿರುದ್ಧ, ಬಳ್ಳಾರಿಯನ್ನು ರಕ್ಷಿಸಲು ಪಾದಯಾತ್ರೆ ಮಾಡಿದ್ದೆವು. ಅಂದು ಸಂತೋಷ್ ಹೆಗ್ಡೆ ಅವರ ವರದಿಯ ಆಧಾರದ ಮೇಲೆ ನಾವು ಹೋರಾಟ ಮಾಡಿದ್ದೆವು. ಆದರೆ ಈಗ ಬಿಜೆಪಿ ಪಾದಯಾತ್ರೆ ಮಾಡುತ್ತಿರುವುದು ಯಾವ ಕಾರಣಕ್ಕಾಗಿ?” ಎಂದು ಪ್ರಶ್ನಿಸಿದರು.
ವಾಲ್ಮೀಕಿ ಪ್ರತಿಮೆ ಉದ್ಘಾಟನೆ ವೇಳೆ ಹಾಕಿದ್ದ ಬ್ಯಾನರ್ ಹರಿದು ಹಾಕಿದವರ ವಿರುದ್ಧ ಕಿಡಿಕಾರಿದ ಅವರು, “ಬ್ಯಾನರ್ ತೆಗೆಯುವ ಅಗತ್ಯವೇನಿತ್ತು? ಅದು ಪ್ರಚೋದನೆಯಲ್ಲವೇ? ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಅವರ ಪತ್ನಿ ಚುನಾವಣೆಯಲ್ಲಿ ಸೋತಿದ್ದಾರೆ ಎನ್ನುವ ಅಸೂಯೆಯಿಂದ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು. ಸಂಕ್ರಾಂತಿಯ ನಂತರ ರಾಜಕೀಯ ಕುಸ್ತಿ ಮತ್ತು ಘರ್ಷಣೆಗಳು ಆರಂಭವಾಗುತ್ತವೆ ಎಂಬ ಬಿಜೆಪಿಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, “ರಾಜ್ಯದಲ್ಲಿ ಯಾವುದೇ ಘರ್ಷಣೆ ಇಲ್ಲ. ಅಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದೇ ಬಿಜೆಪಿಯವರ ಕೆಲಸ. ಜನಸಾಮಾನ್ಯರ ನಡುವೆ ಘರ್ಷಣೆ ಎಲ್ಲಿ ನಡೆಯುತ್ತಿದೆ? ನೀವೇ ಇಂತಹ ವಾತಾವರಣ ನಿರ್ಮಿಸುತ್ತಿದ್ದೀರಿ” ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
