Bailahongala

ನಾಗನೂರ ಗ್ರಾಮದಲ್ಲಿ ಅಶ್ವಾರೂಢ ಬಸವೇಶ್ವರ ಮೂರ್ತಿ ಅನಾವರಣ: ಭಕ್ತಿ ಪರವಶರಾದ ಜನತೆ

Share

ಬೈಲಹೊಂಗಲ ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವಾ ಸಂಸ್ಥೆಯ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲಾದ ಅಶ್ವಾರೂಢ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಮೂರ್ತಿಯ ಅನಾವರಣ ಕಾರ್ಯಕ್ರಮವು ಅತ್ಯಂತ ಭಕ್ತಿಭಾವ ಹಾಗೂ ಸಡಗರದಿಂದ ಜರುಗಿತು.

ನಾಗನೂರ ರುದ್ರಾಕ್ಷಿಮಠದ ಡಾಕ್ಟರ್ ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಕೆಳದಿ ಸಂಸ್ಥಾನದ ಸೇವಾಸಂಸ್ಥೆಯ ಅಧ್ಯಕ್ಷರಾದ ಶರಣ ಶ್ರೀ ಸೋಮಶೇಖರ ನಾಯ್ಕರ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರೆ, ಶರಣ ಶ್ರೀ ಸಿದ್ರಾಮ ಅಪ್ಪಣ್ಣ ಸುಂಕದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ್ ಪಾಟೀಲ್, “ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹುಟ್ಟೂರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಇರುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ನಾವು ಗಳಿಸುವ ಆಸ್ತಿ-ಅಂತಸ್ತು ಶಾಶ್ವತವಲ್ಲ, ಆದರೆ ಸಮಾಜಕ್ಕಾಗಿ ಮಾಡುವ ಜನಪರ ಕಾರ್ಯಗಳು ಮಾತ್ರ ಅಜರಾಮರವಾಗಿ ಉಳಿಯುತ್ತವೆ,” ಎಂದು ಅಭಿಪ್ರಾಯಪಟ್ಟರು.

ಗ್ರಾಮಕ್ಕೆ ಕಂಚಿನ ಅಶ್ವಾರೂಢ ಬಸವೇಶ್ವರ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ ಸೋಮಶೇಖರ ನಾಯ್ಕರ್ ಮಾತನಾಡಿ, “ನಾನು ಕಲಿತ ಶಾಲೆ ಮತ್ತು ಬೆಳೆದ ಗ್ರಾಮಕ್ಕೆ ಋಣ ಸಲ್ಲಿಸಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಜೀವನದ ಕಷ್ಟಗಳನ್ನು ಎದುರಿಸಿ ನಿಲ್ಲುವವನೇ ನಿಜವಾದ ಮನುಷ್ಯ. ಆ ನಿಟ್ಟಿನಲ್ಲಿ ಇಂದು ಈ ಪುಟ್ಟ ಸೇವೆಯನ್ನು ಗ್ರಾಮಕ್ಕೆ ಸಮರ್ಪಿಸಿದ್ದೇನೆ,” ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಆಕರ್ಷಕ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.
ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ರೋಹಿಣಿ ಪಾಟೀಲ್, ಮಯೂರ ನೃತ್ಯ ಅಕಾಡೆಮಿಯ ಹೇಮಾ ವಾಘವಾಡೆ ಹಾಗೂ ನಾಗನೂರ ಗ್ರಾಮದ ಹಿರಿಯರು, ಮುಖಂಡರು ಮತ್ತು ಸಮಸ್ತ ಜನತೆ ಉಪಸ್ಥಿತರಿದ್ದರು.

Tags:

error: Content is protected !!