ಬೆಳಗಾವಿಯ ಬಹುನಿರೀಕ್ಷಿತ ‘ಫ್ಲೈ ಓವರ್’ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನವರಿ 6 ರಂದು ಮತ್ತೊಂದು ಸಭೆ ಕರೆಯಲಾಗುವುದು. ಇದರಲ್ಲಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.


ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತಂತೆ ಸಭೆಯನ್ನು ಕರೆಯಲಾಗಿತ್ತು. ಬೆಳಗಾವಿ ನಗರದ ಫ್ಲೈ ಓವರ್ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಯೋಜನೆಯ ಮಾಹಿತಿ ಪಡೆದರು. ಇದೇ ವೇಳೆ ನಗರದ ಕಸದ ಸಮಸ್ಯೆಯನ್ನು ಪರಿಹರಿಸಲು ಉತ್ತರ ಮತ್ತು ದಕ್ಷಿಣ ಮತಕ್ಷೇತ್ರಗಳಲ್ಲಿ ಸೂಕ್ತ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಸರ್ಕಾರದಿಂದ ಫ್ಲೈ ಓವರ್ ನಿರ್ಮಾಣಕ್ಕೆ 270 ಕೋಟಿ ರೂ. ನಿಧಿ ಮಂಜೂರಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ್ ಚೌಕದವರೆಗೆ ಇದು ಸಂಪರ್ಕ ಕಲ್ಪಿಸಲಿದೆ. ಮೊದಲ ಹಂತ: ರಾಷ್ಟ್ರೀಯ ಹೆದ್ದಾರಿಯಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ, ಎರಡನೇ ಹಂತ ಛತ್ರಪತಿ ಧರ್ಮವೀ ಸಂಭಾಜೀ ಮಹಾರಾಜ್ ಚೌಕದವರೆಗೆ. ಹಾಗೂ ಮೂರನೇ ಹಂತ ಮೂರನೇ ರೈಲ್ವೆ ಗೇಟ್ ವರೆಗೆ ನಿರ್ಮಾಣಗೊಳ್ಳಲಿದೆ. ಬೈಟ್
ಇನ್ನು ನಗರದ ತುರಮುರಿ ತ್ಯಾಜ್ಯ ವಿಲೇವಾರಿ ಘಟಕದ ಮೇಲಿನ ಒತ್ತಡ ಕಡಿಮೆ ಮಾಡಲು ದಕ್ಷಿಣ ಮತ್ತು ಉತ್ತರ ಮತಕ್ಷೇತ್ರಗಳಲ್ಲಿ ಹೊಸ ಜಾಗವನ್ನು ಹುಡುಕಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ಜಾಗ ನಿಗದಿಪಡಿಸಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗುವುದು. ಸಭೆಯಲ್ಲಿ ಸಚಿವರು ಸ್ಮಾರ್ಟ್ ಸಿಟಿ, ಬುಡಾ ಮತ್ತು ಹೆಸ್ಕಾಂ ಅಧಿಕಾರಿಗಳಿಂದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದರು. ಪೂರ್ಣಗೊಂಡಿರುವ ಯೋಜನೆಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ರಾಜು ಸೇಠ್, ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂದೆ ಹಾಗೂ ಪ್ರಶಿಕ್ಷಣಾರ್ಥಿ ಐಪಿಎಸ್ ಅಧಿಕಾರಿ ಡಾ. ಭಾನುದಾಸ್ ಪ್ರಕಾಶ್ ಉಪಸ್ಥಿತರಿದ್ದರು.
