ಖಾನಾಪೂರ ತಾಲೂಕು ಕೃಷಿಕ ಸಮಾಜ, ಕೃಷಿ ಇಲಾಖೆ, ಕೃಷಿಯ ಸಹೋದರ ಇಲಾಖೆಗಳು ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ) ಸಹಯೋಗದಲ್ಲಿ ತಾಲೂಕುಮಟ್ಟದ ರೈತ ದಿನಾಚರಣೆ ಮತ್ತು ಕಿಸಾನ್ ಗೋಷ್ಠಿ ಕಾರ್ಯಕ್ರಮ ಖಾನಾಪೂರ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಜರುಗಿತು.


ಈ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿದ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬೆಳಕೂಡ, “ರೈತರು ಉತ್ತಮ ಇಳುವರಿಯನ್ನು ಪಡೆಯಲು ಮಣ್ಣಿನ ಪರೀಕ್ಷೆ ಮತ್ತು ಭೂಮಿಯ ಫಲವತ್ತತೆ ಪರೀಕ್ಷೆ ಮಾಡಿಸಬೇಕು. ಆಕಳು ಸಾಕಿ ಪಾರಂಪರಿಕ ಪದ್ಧತಿಯಡಿ ಕೃಷಿ ಕೈಗೊಳ್ಳಬೇಕು. ಬೆಳಗಾವಿ ಜಿಲ್ಲೆಯ ವಾಣಿಜ್ಯ ಬೆಳೆಯಾದ ಕಬ್ಬು ಉತ್ತಮವಾಗಿ ಬೆಳೆಯಲು ೧೬ ಪ್ರಕಾರದ ಗೊಬ್ಬರ ಬೇಕು. ಇದರಲ್ಲಿ ಗಾಳಿ, ಬೆಳಕು, ನೀರು ಮತ್ತು ಭೂಮಿಯ ಸತ್ವದಲ್ಲಿ ಅರ್ಧದಷ್ಟು ಗೊಬ್ಬರ ಅಡಗಿದೆ. ಉಳಿದಂತೆ ಲಘು ಪೋಷಕಾಂಶಗಳು, ಸಾವಯವ ಗೊಬ್ಬರ ನೀಡಿದರೆ ಉತ್ತಮ ಇಳುವರಿ ಸಾಧ್ಯ” ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಂಕರಗೌಡ ಪಾಟೀಲ, ತಾಲೂಕು ಘಟಕದ ಅಧ್ಯಕ್ಷ ಕೋಮಲ ಜಿನಗೊಂಡ, ಜಿಲ್ಲಾ ಪ್ರತಿನಿಧಿ ಕೃಷ್ಣಾಜಿ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಸತೀಶ ಮಾವಿನಕೊಪ್ಪ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಿರಣ ಉಪಾಳೆ, ಕೃಷಿಕ ಸಮಾಜದ ಜ್ಯೋತಿಬಾ ರೇಮಾಣಿ, ವಿಜಯ ಕಾಮತ, ರಮೇಶ ಪಾಟೀಲ ಸೇರಿದಂತೆ ರೈತರು, ರೈತ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ತೋಟಗಾರಿಕೆ ವಿಜ್ಞಾನಿ ಕೆ.ಟಿ ಪಾಟೀಲ, ಕೃಷಿ ವಿವಿ ಪ್ರಾಧ್ಯಾಪಕಿ ನಮಿತಾ ರಾವೂತ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆಗೈದ ತಾಲೂಕಿನ ಶ್ರೀನಾಥ್ ಹನುಮಂತ ನಾಯ್ಕ ಶಿವಾಜಿ ಮಾದಾರ, ಕೇದಾರಿ ಬಡಿಗೇರ,ಮಕ್ತುಮಸಾಬ್ ಪಾಟೀಲ ಅವರನ್ನು ಕೃಷಿಕ ಸಮಾಜದ ವತಿಯಿಂದ ಆದರ್ಶ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
