ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿಂದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಹ ಘಟನೆ ನಡೆದಿದೆ. ತಮ್ಮನ್ನು ಸೋಲಿಸುವಂತೆ ಮುಸ್ಲಿಮರಿಗೆ ಕರೆ ನೀಡಿದ್ದ ಅಲ್ಲಮಪ್ರಭು ಅಹಿಂದ ಗುರುಪೀಠದ ಪರಮೇಶ್ವರಾನಂದ ಸ್ವಾಮೀಜಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅತ್ಯಂತ ಕಠಿಣ ಮತ್ತು ವಿವಾದಾತ್ಮಕ ಶಬ್ದಗಳಲ್ಲಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಸ್ವಾಮೀಜಿಯ ಧರ್ಮದ ಬಗ್ಗೆಯೇ ಪ್ರಶ್ನೆ ಎತ್ತಿರುವ ಯತ್ನಾಳ್, ಸಾರ್ವಜನಿಕವಾಗಿ ಅತ್ಯಂತ ಹಗುರವಾದ ಮಾತುಗಳನ್ನಾಡಿದ್ದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಶಾಸಕ ಯತ್ನಾಳ್ ಅವರ ಆಕ್ರೋಶದ ಅಲೆ ಜಮಖಂಡಿಯಲ್ಲಿ ಸ್ಫೋಟಗೊಂಡಿದೆ. “ನನ್ನನ್ನು ಸೋಲಿಸುತ್ತೇನೆ ಎಂದು ಶಪಥ ಮಾಡಿರುವ ಆತ ಹಿಂದೂವೋ ಅಥವಾ ಸಾಬನೋ ಎಂದು ಮೊದಲು ತಪಾಸಣೆ ಮಾಡಬೇಕು” ಎಂದು ಯತ್ನಾಳ್ ಏಕವಚನದಲ್ಲೇ ಗುಡುಗಿದ್ದಾರೆ. “ಸ್ವಾಮೀಜಿ ಹೆಸರು ಇಟ್ಟುಕೊಳ್ಳುವ ಬದಲು ಮೈಬೂಬ್ ಸಾಬ್ ಎಂದು ಇಟ್ಟುಕೊಳ್ಳಲಿ” ಎಂದು ವ್ಯಂಗ್ಯವಾಡಿದ ಅವರು, ನಿಜಗುಣಾನಂದ ಶ್ರೀ ಸೇರಿದಂತೆ ಹಲವು ಸ್ವಾಮೀಜಿಗಳ ವಿರುದ್ಧ ಸನಾತನ ಧರ್ಮದ ರಕ್ಷಣೆಯ ಹೆಸರಲ್ಲಿ ಹರಿಹಾಯ್ದಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಲು ಆಗ್ರಹಿಸಿದ್ದ ಸ್ವಾಮೀಜಿಯ ನಿಲುವನ್ನು ಯತ್ನಾಳ್ ತೀವ್ರವಾಗಿ ಖಂಡಿಸಿದರು.
