ಬೆಂಗಳೂರಿನಲ್ಲಿ ಬೃಹತ್ ಮಟ್ಟದಲ್ಲಿ ಎಂಡಿ ಡ್ರಗ್ಸ್ ತಯಾರಿಸಿ ದೇಶಾದ್ಯಂತ ಸಪ್ಲೈ ಮಾಡುತ್ತಿದ್ದ ಜಾಲವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ, ಮಹಾರಾಷ್ಟ್ರದ ಚಂದಗಡ ತಾಲೂಕಿನ ಮಳೇವಾಡಿ ಗ್ರಾಮದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನ ಹಿನ್ನೆಲೆ ಈಗ ಲಭ್ಯವಾಗಿದೆ.


ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದ ಕಿಂಗ್ಪಿನ್ ಪ್ರಶಾಂತ್ ಪಾಟೀಲ್, ಚಂದಗಡದಲ್ಲಿ ದಾಳಿ ನಡೆದಾಗ ಬೆಳಗಾವಿಗೆ ಓಡಿಬಂದು ಬಾಡಿಗೆ ಮನೆಯಲ್ಲಿ ಅವಿತಿದ್ದ. ದೇಶಾದ್ಯಂತ ಮಾದಕ ವಸ್ತು ಪೂರೈಸುತ್ತಿದ್ದ ಈತ, ಪೊಲೀಸರಿಂದ ತಪ್ಪಿಸಿಕೊಳ್ಳಲು ಪದೇ ಪದೇ ಸ್ಥಳ ಬದಲಿಸುತ್ತಾ ತನ್ನ ಕರಾಳ ಜಾಲವನ್ನು ವಿಸ್ತರಿಸಿದ್ದ. ಇದೀಗ ಮಹಾರಾಷ್ಟ್ರ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದು, ಬೆಂಗಳೂರಿನ ಮೂರು ಡ್ರಗ್ಸ್ ಕಾರ್ಖಾನೆಗಳನ್ನು ಧ್ವಂಸಗೊಳಿಸಿ ಬೃಹತ್ ಜಾಲವನ್ನು ಭೇದಿಸಿದ್ದಾರೆ.

ಎರಡು ವರ್ಷದ ಹಿಂದೆ ಚಂದಗಡದಲ್ಲಿ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆದಾಗ ತಪ್ಪಿಸಿಕೊಂಡಿದ್ದ ಪ್ರಶಾಂತ್, ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದ. ಬೆಂಗಳೂರಿನಲ್ಲಿ ಈತ ನಡೆಸುತ್ತಿದ್ದ ಮೂರು ಫ್ಯಾಕ್ಟರಿಗಳನ್ನು ಧ್ವಂಸ ಮಾಡಿರುವ ಪೊಲೀಸರು, ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಎನ್-ಎಟಿಎಫ್ ತಂಡದ ಅಧಿಕಾರಿಗಳು ಅತ್ಯಂತ ಕೌಶಲ್ಯದಿಂದ ಈ ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕರು ಡ್ರಗ್ಸ್ ಬಗ್ಗೆ ಮಾಹಿತಿ ನೀಡಲು 07218000073 ಸಂಖ್ಯೆಗೆ ಕರೆ ಮಾಡಲು ಕೋರಿದ್ದಾರೆ.


