ಬೆಳಗಾವಿ ತಾಲೂಕಿನ ಕಾಕತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆದ್ದಾರಿಯ ಬದಿಯಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಲಾರಿಯೊಂದು ಧಾವಿಸಿ ಈ ಅವಘಡ ಸಂಭವಿಸಿದೆ.


ಕಾಕತಿ ರಾಷ್ಟ್ರೀಯ ಹೆದ್ದಾರಿಯ ಬರ್ಡೆ ಧಾಬಾ ಸಮೀಪ ಕಾರ್ಮಿಕರು ರಸ್ತೆಗೆ ಪೇಂಟಿಂಗ್ ಮಾಡುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಅಲ್ಲಿ ನಿಂತಿದ್ದ ಸರಕು ಸಾಗಣೆ ಬೊಲೆರೊ ವಾಹನಕ್ಕೆ ಬೆಳಗಾವಿ ಕಡೆಗೆ ವೇಗವಾಗಿ ಬಂದ ಸರಕು ಸಾಗಣೆ ಲಾರಿಯೊಂದು ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಾಹನಗಳು ನಜ್ಜುಗುಜ್ಜಾಗಿದ್ದು, ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಬಿಜಯ್, ಮೊಮಿನ್, ಬಜರಂಗಿ ಮತ್ತು ಶಶಮಣಿ ಎಂದು ಗುರುತಿಸಲಾಗಿದೆ.

ಇವರ ಪೈಕಿ ಒಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸಮಾಜ ಸೇವಕರಾದ ಅವಧೂತ್ ತುಡವೇಕರ್, ದರ್ಶನ್ ಹುಳಬತ್ತೆ, ಸಂತೋಷ್ ದರೇಕರ್, ಪದ್ಮಪ್ರಸಾದ್ ಹೂಲಿ ಮತ್ತು ರಾಜು ಟಕ್ಕೇಕರ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಗಾಯಾಳುಗಳನ್ನು ಕೂಡಲೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಲಾರಿ ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
