ಬೆಳಗಾವಿ ನಗರದಲ್ಲಿ ಅಪರಾಧ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಪೊಲೀಸರು, ಹೆರಾಯಿನ್ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವುದರ ಜೊತೆಗೆ ಮಟಕಾ ಅಡ್ಡೆ ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.ಬೆಳಗಾವಿಯ ಕಂಗ್ರಾಳ ಕೆ.ಹೆಚ್. ಮಹಾದೇವ ಮಂದಿರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಹಾದೇವ ಗಜಾನನ ಪಾಟೀಲ (27) ಮತ್ತು ವಿನಾಯಕ ಸುಬ್ಬರಾವ ಚಿನ್ನಾಳ್ಳರ ಬಂಧಿತ ಆರೋಪಿಯಾಗಿದ್ದು,
₹21,400/- ಮೌಲ್ಯದ 10.15 ಗ್ರಾಂ ತೂಕದ 107 ಹೆರಾಯಿನ್ ಪುಡಿಯ ಸಣ್ಣ ಪ್ಯಾಕೆಟ್ಗಳು ಒಪ್ಪೋ ಮತ್ತು ವಿವೋ ಕಂಪನಿಯ ಎರಡು ಮೊಬೈಲ್ ಫೋನ್ಗಳು ಮತ್ತು ₹1,000/- ನಗದು ಹಣವನ್ನು ಜಪ್ತಿ ಮಾಡಲಾಗಿದೆ. : ಮುಂಬೈನ ‘ನಾನ ಕೋಳವಾಡ ಅಮ್ಮ’ ಎಂಬಾಕೆಯಿಂದ ಹೆರಾಯಿನ್ ತಂದಿರುವುದಾಗಿ ತಿಳಿದುಬಂದಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪಿಐ ನಂದೀಶ್ವರ ಕುಂಬಾರ ಮತ್ತು ತಂಡ ಈ ದಾಳಿ ನಡೆಸಿದೆ.
ಖಂಜರಗಲ್ಲಿಯಲ್ಲಿ ಸಾರ್ವಜನಿಕರಿಂದ ಹಣ ಪಡೆದು ‘ಮೇನ್ ರತನ್ ಮುಂಬೈ ಓಸಿ ಮಟಕಾ’ ಆಡಿಸುತ್ತಿದ್ದ ಹೈಮನ ಹಸನಸಾಬ ಚಿಕ್ಕೋಡಿ, ಮತ್ತು ರಫೀಕ ಹುಸೇನಸಾಬ ಮುಲ್ಲಾ ಈ ಇಬ್ಬರನ್ನು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹2,140/- ನಗದು ಹಾಗೂ ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿಗಳನ್ನು ಜಪ್ತಿ ಮಾಡಿ ಪಿಎಸ್ಐ ವಿಠಲ ಹಾವನವರ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇನ್ನು ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ಬೆಳಗಾವಿ ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ.ಡಿಸೆಂಬರ್ 26 ರಂದು ಒಂದೇ ದಿನದಲ್ಲಿ ಕುಡಿದು ವಾಹನ ಚಾಲನೆ ಮಾಡಿದ 15 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಮೋಟಾರ್ ವಾಹನ ಕಾಯ್ದೆಯಡಿ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಆಯುಕ್ತರ ಶ್ಲಾಘನೆ: ಈ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾದ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.
