ವಿಶ್ವಕ್ಕೆ ಅಹಿಂಸಾ ತತ್ವ ಸಾರುತ್ತಿರುವ ದಿಗಂಬರ ಜೈನ ಮುನಿ ಸಂಘದ ಆಚಾರ್ಯರಾದ ಶ್ರೀ ವರ್ಧಮಾನ ಸಾಗರಜಿ ಮುನಿ ಮಹಾರಾಜರ ಸಾನಿಧ್ಯದ 26 ಮುನಿಗಳ ಸಂಘಕ್ಕೆ ಶಿರಗುಪ್ಪಿ ಗ್ರಾಮದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಜೈನ ಕಾಶಿ ಶ್ರವಣಬೆಳಗೊಳದಿಂದ ಶಿರಗುಪ್ಪಿವರೆಗೆ ಸುಮಾರು 700 ಕಿಲೋಮೀಟರ್ ದೂರವನ್ನು ಪಾದಯಾತ್ರೆಯ ಮೂಲಕ ಕ್ರಮಿಸಿ ಆಗಮಿಸಿದ ಮುನಿ ಸಂಘವನ್ನು ಶಿರಗುಪ್ಪಿ ಗ್ರಾಮದ ಜೈನ ಸಮಾಜದ ವತಿಯಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಶುಕ್ರವಾರ ಶಿರಗುಪ್ಪಿಯ ಪಾರ್ಶ್ವನಾಥ ಜೈನ ಭವನದಲ್ಲಿ ಆಚಾರ್ಯರ ಸಾನಿಧ್ಯದಲ್ಲಿ ವಿಶೇಷ ಪ್ರವಚನ ಕಾರ್ಯಕ್ರಮ ಜರುಗಿತು.
ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರು ತಮ್ಮ ಸಂಘದ ಯುವ ದಿಗಂಬರ ಮುನಿಗಳಾದ ವಿದ್ಯಾಸಾಗರ ಮುನಿ ಮಹಾರಾಜರಿಗೆ ಆಚಾರ್ಯ ಪದವಿ ನೀಡುವ ಪವಿತ್ರ ಕಾರ್ಯಕ್ರಮವು ಇದೇ ಫೆಬ್ರವರಿ 19 ಮತ್ತು 20 ರಂದು ನಡೆಯಲಿದೆ ಎಂದು ಘೋಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಶ್ರಾವಕ-ಶ್ರಾವಿಕೆಯರು, ಆಚಾರ್ಯ ಪದವಿ ನೀಡುವ ಈ ಐತಿಹಾಸಿಕ ಕಾರ್ಯಕ್ರಮವು ತಮ್ಮ ಗ್ರಾಮಗಳಲ್ಲಿಯೇ ನಡೆಯಲಿ ಎಂದು ಮುನಿಗಳ ಬಳಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಾಂತ ಸಾಗರ ಮುನಿ ಮಹಾರಾಜರು, “ವಿದ್ಯಾಸಾಗರ ಮುನಿಗಳಿಗೆ ಆಚಾರ್ಯ ಪದವಿ ನೀಡುವ ಕಾರ್ಯಕ್ರಮವು ಫೆಬ್ರವರಿ 19 ಮತ್ತು 20ರಂದು ಜರುಗಲಿದ್ದು, ಸ್ಥಳವನ್ನು ಮುಂದಿನ ಎರಡು ದಿನಗಳಲ್ಲಿ ನಿಶ್ಚಿತಗೊಳಿಸಲಾಗುವುದು. ಈ ಸಮಾರಂಭದಲ್ಲಿ ದೇಶದಾದ್ಯಂತ ರಾಜಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಹಾಗೂ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ,” ಎಂದು ತಿಳಿಸಿ ಕಾರ್ಯಕ್ರಮದ ಯಶಸ್ಸಿಗೆ ಆಶೀರ್ವದಿಸಿದರು.
ಶಿರಗುಪ್ಪಿ ಜೈನ ಸಮಾಜದ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯವಾದಿ ಅಭಯ್ ಕುಮಾರ್ ಅಕಿವಾಟೆ ಮಾತನಾಡಿ, “ಈ ಪವಿತ್ರ ಕಾರ್ಯಕ್ರಮ ಶಿರಗುಪ್ಪಿಯಲ್ಲಿ ನಡೆದರೆ ಸಮಾಜದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಒಂದು ವೇಳೆ ಬೇರೆ ನಗರಗಳಲ್ಲಿ ನಡೆದರೂ ಗ್ರಾಮದ ವತಿಯಿಂದ ಬೆಂಬಲ ನೀಡುತ್ತೇವೆ,” ಎಂದರು.
ಈ ಸಂದರ್ಭದಲ್ಲಿ ಸಾಂಗ್ಲಿಯ ಸಮಾಜದ ಮುಖಂಡ ರಾಜು ಪಾಟೀಲ್, ಬೆಲವಡಿಯ ಮಗದುಮ್ ಸರ್, ಕೊಲ್ಲಾಪುರದ ರವಿ ಪಾಟೀಲ್, ಶಿರಗುಪ್ಪಿ ಜೈನ್ ಸಮಾಜದ ಅಧ್ಯಕ್ಷ ಮಹಾವೀರ ಕಾತ್ರಳೆ, ವಿಜಯ್ ಅಕಿವಾಟೆ, ಬೊಮ್ಮನಾ ಚೌಗುಲೆ, ಭೀಮು ಭೋಲೆ, ಬಾಬು ಕಾರದಗೆ, ಸುನಂದಾ ಕಾತ್ರಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

