ಬೆಳಗಾವಿ ನಗರವು ಮತ್ತೊಮ್ಮೆ ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಒಗ್ಗಟ್ಟನ್ನು ಸಾಬೀತುಪಡಿಸಿದೆ. ಧರ್ಮದ ಗಡಿಗಳನ್ನು ಮೀರಿ ನಡೆದ ಘಟನೆಯೊಂದರಲ್ಲಿ, ಮುಸ್ಲಿಂ ಕುಟುಂಬವೊಂದು ತಾನು ದಶಕಗಳಿಂದ ಸಲಹಿದ್ದ ಹಿಂದೂ ವೃದ್ಧೆಯ ಅಂತ್ಯಸಂಸ್ಕಾರವನ್ನು ಅವರ ಧರ್ಮದ ಸಂಪ್ರದಾಯದಂತೆಯೇ ನೆರವೇರಿಸಿ ಸೌಹಾರ್ದತೆಗೆ ಮಾದರಿಯಾಗಿದೆ.
ಬಾಗ್ಯನಗರದ ನಿವಾಸಿ ಶಾಂತಾ ಬಾಯಿ ಎಂಬುವರು ಕಳೆದ 20 ವರ್ಷಗಳಿಂದ ಗಾಂಧಿನಗರದ ಮುಸ್ಲಿಂ ಕುಟುಂಬವೊಂದರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಈ ಕುಟುಂಬವು ಶಾಂತಾ ಬಾಯಿಯವರನ್ನು ತಮ್ಮ ಸ್ವಂತ ಮನೆಯ ಸದಸ್ಯರಂತೆ ಪ್ರೀತಿ ಮತ್ತು ಘನತೆಯಿಂದ ನಡೆಸಿಕೊಂಡಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾದರು. ವಿಷಯ ತಿಳಿಯುತ್ತಿದ್ದಂತೆಯೇ ಇಕ್ಬಾಲ್ ಜಕಾತಿ ಅವರು ಸಾಮಾಜಿಕ ಕಾರ್ಯಕರ್ತ ಹಾಗೂ ಮಾಜಿ ಮೇಯರ್ ವಿಜಯ್ ಮೋರೆ ಅವರನ್ನು ಸಂಪರ್ಕಿಸಿದರು.
ತಕ್ಷಣವೇ ಕಾರ್ಯಪ್ರವೃತ್ತರಾದ ವಿಜಯ್ ಮೋರೆ ಅವರು ಮೃತದೇಹವನ್ನು ಆಸ್ಪತ್ರೆಯಿಂದ ಸದಾಶಿವ ನಗರದ ಸ್ಮಶಾನಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಂಡರು. ವಿಜಯ್ ಮೋರೆ, ಅಲನ್ ವಿಜಯ್ ಮೋರೆ, ಇಕ್ಬಾಲ್ ಜಕಾತಿ, ನಿಸಾರ್, ಶಮಶೇರ್ ಮತ್ತು ಸಂಜಯ್ ಕೋಲಕಾರ್ ಅವರು ಸ್ಮಶಾನದ ಸಿಬ್ಬಂದಿಯ ಸಹಯೋಗದೊಂದಿಗೆ ಶಾಂತಾ ಬಾಯಿ ಅವರ ಅಂತ್ಯಸಂಸ್ಕಾರವನ್ನು ಸಂಪೂರ್ಣ ಹಿಂದೂ ಸಂಪ್ರದಾಯದಂತೆಯೇ ನೆರವೇರಿಸಿದರು. ಬೆಳಗಾವಿಯ ಈ ಸಹೋದರತ್ವ ಮತ್ತು ಪರಸ್ಪರ ಗೌರವದ ಸಂಪ್ರದಾಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

