londa

ಲೋಂಡಾ ಹೈಸ್ಕೂಲ್‌ನಲ್ಲಿ ವಾರ್ಷಿಕ ಕ್ರೀಡಾ ಸಂಭ್ರಮ: ನಾಲ್ವರು ಅಗ್ನಿವೀರರಿಗೆ ಭವ್ಯ ಸನ್ಮಾನ

Share

ಖಾನಾಪೂರ ತಾಲೂಕಿನ ಲೋಂಡಾ ಹೈಸ್ಕೂಲ್‌ನಲ್ಲಿ ಇತ್ತೀಚೆಗೆ ವಾರ್ಷಿಕ ಕ್ರೀಡಾ ಮಹೋತ್ಸವ ಹಾಗೂ ಭಾರತೀಯ ಭೂಸೇನೆಯ ‘ಅಗ್ನಿವೀರ’ ಯೋಜನೆಗೆ ಆಯ್ಕೆಯಾದ ಶಾಲೆಯ ನಾಲ್ವರು ಹಳೆಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಅತ್ಯಂತ ಸಂಭ್ರಮದಿಂದ ಜರುಗಿತು.


ಲೋಂಡಾ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಅಶೋಕ ನೇಸರಿಕರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು. ಪ್ರಾರಂಭದಲ್ಲಿ ಅಧ್ಯಕ್ಷರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಿಶೋರ್ ಹೆಬ್ಬಾಳ್ಕರ್ ಅವರು ಕ್ರೀಡಾ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು: “ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇಂದಿನ ಕಾಲದಲ್ಲಿ ಮೊಬೈಲ್‌ಗೆ ಅಂಟಿಕೊಳ್ಳದೆ, ಮೈದಾನಕ್ಕೆ ಇಳಿದು ಆಟವಾಡುವ ಮೂಲಕ ಸದೃಢ ಶರೀರವನ್ನು ರೂಪಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ದೇಶಸೇವೆಗೆ ಆಯ್ಕೆಯಾಗಿ ಲೋಂಡಾ ಭಾಗದ ಕೀರ್ತಿ ಹೆಚ್ಚಿಸಿದ ಶಾಲೆಯ ನಾಲ್ವರು ಹಳೆಯ ವಿದ್ಯಾರ್ಥಿಗಳಾದ. ಪ್ರದೀಪ್ ಡಿಗೇಕರ್ , ಆಕಾಶ್ ಘಾಡಿ, ಲಕ್ಷ್ಮಣ್ ಗಾವಡೆ ಮತ್ತು ಸದಾನಂದ ದೇಸಾಯಿ ಈ ನಾಲ್ವರು ಅಗ್ನಿವೀರರನ್ನು ಗಣ್ಯರ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಹಾರೈಸಿ ಗೌರವಿಸಲಾಯಿತು.
ಇದೇ ವೇಳೆ ಲೋಂಡಾ ಹೈಸ್ಕೂಲ್‌ನ ನೂತನ ಸದಸ್ಯರನ್ನು ಶಾಲಾ ಸಿಬ್ಬಂದಿ ವರ್ಗದವರು ಶಾಲು ಹೊದಿಸಿ, ಶ್ರೀಫಲ ನೀಡಿ ಸ್ವಾಗತಿಸಿದರು. ಶಾಲೆಯ ಜನರಲ್ ಸೆಕ್ರೆಟರಿ ಸಾಕ್ಷಿ ಸಾವರ್ಡೇಕರ್ ಮತ್ತು ಎಲ್.ಆರ್. ಮುಕ್ತೇಶ್ವರಿ ಅವರು ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು.ಕಾರ್ಯಕ್ರಮದಲ್ಲಿ ಸಂತೋಷ್ ಭೂತಕಿ, ನರೇಂದ್ರ ನಾಯ್ಕ್, ಬಾಬುಲಾಲ್ ಪಟೇಲ್, ಸುರೇಶ್ ದೇಸಾಯಿ, ವಿನಯ್ ಮಹಾಲಂಗ್, ಪತ್ರಕರ್ತ ವಸಂತ್ ಕಾಳಗೆ, ವಿಜಯಕುಮಾರ್ ಹೆಬ್ಬಾಳ್ಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಾರಾಯಣ ಗಾವಡೆ ಮತ್ತು ಎನ್.ಡಿ. ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಫರ್ ಪಟೇಲ್ ಅವರು ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

Tags:

error: Content is protected !!