ಅಥಣಿ ಪಟ್ಟಣದ ಶಿವಯೋಗಿ ನಗರದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ.

ಕಬ್ಬಿನ ಲೋಡ್‌ನಿಂದ ಕೂಡಿದ್ದ ಟ್ರ್ಯಾಕ್ಟರ್ ಕಾರಿನ ಮೇಲೆ ಮಗುಚಿದ ಪರಿಣಾಮ ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ದಿಢೀರನೆ ಅಡ್ಡ ಬಂದಿದ್ದಾನೆ. ಆತನನ್ನು ತಪ್ಪಿಸಲು ಹೋದ ಟ್ರ್ಯಾಕ್ಟರ್ ಚಾಲಕ ನಿಯಂತ್ರಣ ತಪ್ಪಿದ್ದು, ಪಕ್ಕದಲ್ಲೇ ಇದ್ದ ಕಾರಿನ ಮೇಲೆ ಟ್ರ್ಯಾಕ್ಟರ್ ಟ್ರ್ಯಾಲಿ ಮಗುಚಿ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
