ಹಿಂದೂ ಧರ್ಮದಲ್ಲಿ ದೇವರಿಗೆ ಪವಿತ್ರ ಸ್ಥಾನವಿದೆ. ಆದರೆ, ಪೂಜಿಸುವ ಫೋಟೋಗಳು ಸ್ವಲ್ಪ ಮುಕ್ಕಾದ ತಕ್ಷಣ ಅವುಗಳನ್ನು ಮರ-ಗಿಡಗಳ ಕೆಳಗೆ ತಂದು ಹಾಕುವುದು ದೇವರಿಗೆ ಮಾಡುವ ಅಪಮಾನ ಎಂದು ಭಾವಿಸಿರುವ ಸರ್ವ ಲೋಕಸೇವಾ ಫೌಂಡೇಶನ್, ಅಂತಹ ಸಾವಿರಾರು ಫೋಟೋಗಳನ್ನು ಸಂಗ್ರಹಿಸಿ ಶಾಸ್ತ್ರೋಕ್ತವಾಗಿ ವಿಸರ್ಜಿಸುವ ಮೂಲಕ ಜಿಲ್ಲೆಗೆ ಮಾದರಿಯಾಗಿದೆ.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಮಂಗಳವಾರ ಬೆಳಗಾವಿ ತಾಲೂಕಿನ ವೆಂಗೂರಲಾ, ಅಂಬೇವಾಡಿ ಮತ್ತು ಮಾರ್ಕಂಡೇಯ ನದಿ ಬಳಿಯ ಗಣೇಶ ದೇವಸ್ಥಾನದ ಆವರಣದಲ್ಲಿ ಅಭಿಯಾನ ನಡೆಸಲಾಯಿತು. ಗಿಡಗಳ ಕೆಳಗೆ ರಾಶಿ ಬಿದ್ದಿದ್ದ ಸಾವಿರಾರು ಫೋಟೋಗಳನ್ನು ತಂಡದ ಸದಸ್ಯರು ಭಕ್ತಿಯಿಂದ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರೇಶ ಬಸಯ್ಯ ಹಿರೇಮಠ, “ನಮ್ಮ ಹಿಂದೂ ಸಮಾಜದಲ್ಲಿ ದೇವರ ಫೋಟೋಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಫೋಟೋಗಳು ಹಳೆಯದಾದಾಗ ಅಥವಾ ಮುಕ್ಕಾದಾಗ ಅವುಗಳನ್ನು ರಸ್ತೆ ಬದಿಯ ಗಿಡಗಳ ಕೆಳಗೆ ಎಸೆಯುವುದು ಸರಿಯಲ್ಲ. ಇದು ದೇವರಿಗೆ ನೀಡುವ ಗೌರವವಲ್ಲ. ಅದರ ಬದಲು ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಬೇಕು,” ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಈ ಪುಣ್ಯ ಕಾರ್ಯದಲ್ಲಿ ರವಿ ಕೋಕಿತ್ಕರ್, ಸಂತೋಷ್, ದೇವಪ್ಪ ಕಾಂಬಳೆ, ಸೂರಜ್ ತೋರವಾಟ, ನಾಗೇಶ್ ಶಿಂಧೆ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.

