Vijaypura

ತಿಡಗುಂಡಿ ರೈತರ ಆಕ್ರೋಶ: ಕೈಗಾರಿಕಾ ಭೂ ಕಬಳಿಕೆಗೆ ತೀವ್ರ ವಿರೋಧ – ಸಚಿವ ಎಂ.ಬಿ. ಪಾಟೀಲ್ ಮನೆ ಬಳಿ ಉದ್ವಿಗ್ನತೆ

Share

ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರ ನಿವಾಸದ ಬಳಿ ಇಂದು ನಾಟಕೀಯ ಬೆಳವಣಿಗೆ ನಡೆದಿದೆ. ತಿಡಗುಂಡಿ ಗ್ರಾಮದ ರೈತರು ಕೈಗಾರಿಕಾ ಬಳಕೆಗೆ 1,203 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ನೀಡುವುದಿಲ್ಲ ಎಂದು ಘೋಷಿಸಿ ಸಚಿವರ ಮನೆಗೆ ತೆರಳಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ತಿಡಗುಂಡಿ ಗ್ರಾಮದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪನೆ ಸಂಬಂಧ ಕೆಐಡಿಬಿ ಇಲಾಖೆಯಿಂದ ಭೂಮಿ ಪರಿಶೀಲನೆ ನಡೆಯುತ್ತಿದ್ದು, ನಿನ್ನೆ ಕೆಐಡಿಬಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ ವೇಳೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ರೈತರು ಹಾಗೂ ಕೆಐಡಿಬಿ ಸಿಬ್ಬಂದಿಯ ನಡುವೆ ವಾಗ್ವಾದ ಉಂಟಾಗಿ, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.ಇದಾದ ಬಳಿಕ ಇಂದು ತಿಡಗುಂಡಿ ಗ್ರಾಮದ ಎಲ್ಲಾ ರೈತರು ಹಾಗೂ ಮಹಿಳೆಯರು ಒಟ್ಟಾಗಿ ಸಚಿವ ಎಂ.ಬಿ. ಪಾಟೀಲ್ ಅವರ ನಿವಾಸಕ್ಕೆ ತೆರಳಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಸಚಿವರು ಮತ್ತು ರೈತರ ನಡುವೆ ತೀವ್ರ ಉದ್ವಿಗ್ನತೆಯ ಮಾತುಕತೆ ನಡೆಯಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ರೈತರು, ಈ ಭೂಮಿ ನೀರಾವರಿ ಸೌಲಭ್ಯ ಹೊಂದಿರುವ ಅತ್ಯಂತ ಫಲವತ್ತಾದ ಕೃಷಿ ಭೂಮಿಯಾಗಿದೆ ಎಂದು ಹೇಳಿ,“ಕೈಗಾರಿಕಾ ಬಳಕೆಗೆ ಬಂಜರು ಭೂಮಿಯನ್ನು ಬಳಸಲಿ. ಫಲವತ್ತಾದ ಕೃಷಿ ಭೂಮಿಯನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ” ಎಂದು ಪಟ್ಟು ಹಿಡಿದರು.

ಮಹಿಳಾ ರೈತರು ಕೂಡ,“ನಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುತ್ತೇವೆ. ಸರ್ಕಾರ ತನ್ನ ನಿಲುವು ಮುಂದುವರಿಸಿದರೂ ಭೂಮಿಯನ್ನು ನೀಡುವುದಿಲ್ಲ” ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.ತಿಡಗುಂಡಿ ಗ್ರಾಮದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪನೆ ಸಚಿವರ ಕನಸಿನ ಯೋಜನೆಯಾಗಿದ್ದು, ಇದೀಗ ಈ ಯೋಜನೆಗೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಮುಂದಿನ ಬೆಳವಣಿಗೆಗಳತ್ತ ಜಿಲ್ಲೆಯ ಗಮನ ಕೇಂದ್ರೀಕೃತವಾಗಿದೆ.

Tags:

error: Content is protected !!