ಬಾಗಲಕೋಟೆ ನಗರದಲ್ಲಿ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2025’ರ ಯಶಸ್ಸಿಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಅದ್ಧೂರಿ ಮ್ಯಾರಥಾನ್ ಕಾಲ ನಡಿಗೆಯನ್ನು ಆಯೋಜಿಸಲಾಗಿತ್ತು. ನವನಗರದ ಜಿಲ್ಲಾಡಳಿತ ಭವನದಿಂದ ಆರಂಭವಾದ ಈ ನಡಿಗೆಯಲ್ಲಿ ನೂರಾರು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದ ಆವರಣದಿಂದ ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಈ ಮ್ಯಾರಥಾನ್’ಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಕಾಲ ನಡಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ವಿದ್ಯಾಗಿರಿಯ ಕಾಲೇಜು ವೃತ್ತದವರೆಗೂ ಸಾಗಿ ಬಂದಿತು. ವಾಣಿಜ್ಯ ಮೇಳದ ಕುರಿತು ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಅರಿವು ಮೂಡಿಸುವುದು ಈ ಮ್ಯಾರಥಾನ್’ನ ಮುಖ್ಯ ಉದ್ದೇಶವಾಗಿತ್ತು.
ಈ ಮ್ಯಾರಥಾನ್ ನಡಿಗೆಯಲ್ಲಿ ಜಿಲ್ಲೆಯ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮಾತ್ರವಲ್ಲದೆ, ಕೃಷಿ ವಿಭಾಗದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಂತರಾಷ್ಟ್ರೀಯ ಮಟ್ಟದ ಈ ವಾಣಿಜ್ಯ ಮೇಳವು ಜಿಲ್ಲೆಯ ಕೃಷಿ ಮತ್ತು ವಾಣಿಜ್ಯೋದ್ಯಮಕ್ಕೆ ಹೊಸ ವೇದಿಕೆ ಒದಗಿಸಲಿದೆ ಎಂಬ ಆಶಯದೊಂದಿಗೆ ಘೋಷಣೆಗಳನ್ನು ಕೂಗುತ್ತಾ ನಡಿಗೆ ಸಾಗಿತು.
