ಹೆಸರು ಖರೀದಿಗೆ ಸರ್ಕಾರ ಮಾಡಿರುವ ಎಫ್‌ಎಕ್ಯೂ ಮಾನದಂಡವನ್ನು ರದ್ದುಪಡಿಸಿ ಕೂಡಲೇ ರೈತ ಬೆಳೆದ ಎಲ್ಲಾ ಹೆಸರು ಕಾಳುಗಳನ್ನು ಸರ್ಕಾರ ಖರೀದಿ ಮಾಡಬೇಕು ಎಂದು ಆಗ್ರಹಿಸಿ ಕುಂದಗೋಳ ತಾಲೂಕಿನ ಹಿರೇಗುಂಜಳ ಗ್ರಾಮದ ರೈತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರಕೃತಿ ವೈಪರಿತ್ಯದಿಂದಾಗಿ ರೈತ ಬೆಳೆದ ಹೆಸರು ಬೆಳೆ ನಾಶವಾಗಿದೆ. ಮಳೆಯಿಂದಾಗಿ ಹೆಸರು ಕಾಳುಗಳು ಕೆಟ್ಟಿದ್ದು, ಇದಕ್ಕಾಗಿ ಸರ್ಕಾರ ಎಫ್‌ಎಕ್ಯೂ ಎಂಬ ಮಾನದಂಡ ವಿಧಿಸಿದೆ. ಒಳ್ಳೆಯ ಹೆಸರನ್ನು ಮಾತ್ರ ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ಹದಗೆಟ್ಟ ಕಾಳುಗಳಿಗೆ ಸರ್ಕಾರ ಕಡಿಮೆ ದರವನ್ನಾದರೂ ನಿಗದಿ ಮಾಡಿ ರೈತರು ಬೆಳೆದ ಕಾಳುಗಳನ್ನು ಖರೀದಿ ಮಾಡಬೇಕು. ಹವಾಮಾನ ವೈಪರಿತ್ಯದಿಂದ ಆದ ಈ ಸಮಸ್ಯೆಗೆ ರೈತ ಏನು ಮಾಡಬೇಕು? ಈ ರೀತಿ ಹದಗೆಟ್ಟ ಕಾಳಗಳಿಗೂ ಪ್ರತ್ಯೇಕ ದರ ನಿಗದಿ ಮಾಡಿ ಅವುಗಳನ್ನೂ ಖರೀದಿ ಕೇಂದ್ರದ ಮೂಲಕ ಖರೀದಿ ಮಾಡಬೇಕು. ಇಲ್ಲದೇ ಹೋದರೆ ರೈತ ಸಾಕಷ್ಟು ತೊಂದರೆಗೀಡಾಗುತ್ತಾನೆ ಎಂದು ಅನ್ನದಾತ ತನ್ನ ಅಳಲು ತೋಡಿಕೊಂಡಿದ್ದಾನೆ. ಮಧ್ಯಮ ಹಂತದ ಹೆಸರು ಕಾಳುಗಳನ್ನು ಧಾರವಾಡ ಡಿಸಿ ಕಚೇರಿ ಎದುರೇ ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತರು, ಈ ಹೆಸರು ಕಾಳುಗಳನ್ನು ಸರ್ಕಾರ ಖರೀದಿ ಮಾಡದೇ ಹಾಗೇ ಬಿಟ್ಟಿದೆ. ಕಾಳುಗಳು ಕೆಟ್ಟಿದ್ದರೆ ಅದಕ್ಕೆ ಕಡಿಮೆ ದರ ಬೇಕಾದರೆ ನಿಗದಿ ಮಾಡಲಿ. ಈ ಕಾಳುಗಳನ್ನು ರೈತ ತೆಗೆದುಕೊಂಡು ಏನು ಮಾಡಬೇಕು. ಮಳೆಯಿಂದ ಬೆಳೆ ಹಾಳಾದರೆ ರೈತನಾದರೂ ಏನು ಮಾಡಬೇಕು? ಕೂಡಲೇ ಈ ಎಫ್‌ಎಕ್ಯೂ ಮಾನದಂಡವನ್ನು ಸಡಿಲಿಸಿ ರೈತ ಬೆಳೆದ ಎಲ್ಲಾ ಹೆಸರು ಬೆಳೆಯನ್ನು ಸರ್ಕಾರ ಖರೀದಿ ಮಾಡಬೇಕು ಎಂದು ರೈತರು ಒತ್ತಾಯಿಸಿದರು.
