ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚೊಳಚಗುಡ್ಡ ಬಳಿಯ ಮಲಪ್ರಭಾ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗುತ್ತಿದ್ದು, ಸ್ಥಳೀಯ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಕ್ಷೇತ್ರದಲ್ಲಿ ಮರಳು ಮಾಫಿಯಾ ರಾಜಾರೋಷವಾಗಿ ನಡೆಯುತ್ತಿದೆ. ಈ ಅಕ್ರಮವನ್ನು ಪ್ರಶ್ನಿಸಿದ ಕನ್ನಡ ಪರ ಹೋರಾಟಗಾರ ಮಹೇಶ್ ವಡ್ಡರ್ ಮತ್ತು ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಹಗಲು ಹೊತ್ತಿನಲ್ಲೇ ಹಿಟ್ಯಾಚಿಗಳನ್ನು ಬಳಸಿ ಮರಳು ಲೂಟಿ ನಡೆಯುತ್ತಿದೆ. ಈ ಅಕ್ರಮವನ್ನು ಧರ್ಮಣ್ಣ ಪಾತ್ರೋಟಿ ಎಂಬುವವರು ಪ್ರಶ್ನಿಸಿದಾಗ, ಮರಳು ದಂಧೆಕೋರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸ್ಥಳದಲ್ಲಿ ಪೊಲೀಸರು ಹಾಜರಿದ್ದರೂ, ದಂಧೆಕೋರರು ಮತ್ತು ಹೋರಾಟಗಾರರ ನಡುವೆ ವಾಗ್ವಾದ ನಡೆದರೂ ಪೊಲೀಸರು ಅಸಹಾಯಕರಾಗಿ ನಿಂತು ದಂಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದ ಕನ್ನಡಪರ ಹೋರಾಟಗಾರ ಮಹೇಶ್ ವಡ್ಡರ್ ಅವರು ಗಂಭೀರ ಆರೋಪ ಮಾಡಿದ್ದು, ಶಾಸಕರ ಬೆಂಬಲಿಗರು ತಮ್ಮನ್ನು ಫಾಲೋ ಮಾಡುತ್ತಿದ್ದಾರೆ. ಒಂದು ವೇಳೆ ತಮ್ಮ ಜೀವಕ್ಕೆ ಏನಾದರೂ ಆದರೇ ಅದಕ್ಕೆ ನೇರವಾಗಿ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರೇ ಕಾರಣ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಶಾಸಕರ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾಗೆ ಶಾಸಕರ ಬೆಂಬಲವಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಹಿಟ್ಯಾಚಿ ಬಳಸಿ ನಡೆಯುತ್ತಿರುವ ಈ ಅಕ್ರಮ ಮರಳು ದಂಧೆಯನ್ನು ತಡೆಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ ಎಂದರು.
