ಬಾಗಲಕೋಟೆ ಜಿಲ್ಲೆಯಲ್ಲಿ ಚಳಿಯ ತೀವ್ರತೆ ದಾಖಲೆ ಮಟ್ಟಕ್ಕೆ ಏರಿದೆ. ಜಿಲ್ಲೆಯ ಜನತೆ ವಿಪರೀತ ಚಳಿಗೆ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ


ಬಾಗಲಕೋಟೆ ಜಿಲ್ಲೆಯಲ್ಲಿ ಚಳಿಯ ತೀವ್ರತೆ ವಿಪರೀತವಾಗಿದ್ದು, ಜನಜೀವನ ತತ್ತರಿಸಿದೆ. ಜಿಲ್ಲೆಯಲ್ಲಿ ಇಂದು ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್’ಗೆ ದಾಖಲಾಗಿದ್ದು, ಇದು ಈ ವರ್ಷದ ಅತ್ಯಂತ ಕಡಿಮೆ ತಾಪಮಾನವಾಗಿದೆ. “ವಸ್ತೀಲ ಅಮಾವಾಸ್ಯೆ ದಾಟಿ ಮನೆ ಹೊಸಲಿ ದಾಟು ಬಾರುದು” ಎಂಬ ಗಾದೆ ಮಾತು ನಿಜವಾಗಿದ್ದು, ತೀವ್ರ ಚಳಿಗೆ ಜನರು ಥಂಡಾ ಹೊಡೆದಿದ್ದಾರೆ.
ಬೆಳಿಗ್ಗೆ 7 ಗಂಟೆಯಾದರೂ ನಗರದ ವಾಕಿಂಗ್ ಹಾಟ್’ಸ್ಪಾಟ್’ಗಳು ಜನರಿಲ್ಲದೆ ಸಂಪೂರ್ಣ ಖಾಲಿಯಾಗಿವೆ. ವಿಪರೀತ ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಬೆಚ್ಚಗಿನ ಉಡುಪುಗಳ ಮೊರೆ ಹೋಗಿದ್ದು, ಟೊಪ್ಪಿಗೆ, ಸ್ವೆಟರ್, ಗ್ಲೌಸ್ ಧರಿಸಿ ಅನಿವಾರ್ಯವಾಗಿ ಮನೆಯಿಂದ ಹೊರ ಬರುತ್ತಿದ್ದಾರೆ. ಅಲ್ಲಲ್ಲಿ ಬೆಂಕಿಯನ್ನು ಉರಿ ಹಚ್ಚಿ ಮೈ ಕಾಯಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಡಿಸೆಂಬರ್ 17ರವರೆಗೂ ಇದೇ ರೀತಿಯ ಚಳಿ ಮುಂದುವರೆಯುವ ಸಾಧ್ಯತೆ ಇದೆ. ಆದರೆ, ಜನವರಿ ತಿಂಗಳಲ್ಲಿ ಚಳಿಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದ್ದು, ತಾಪಮಾನ 5 ಡಿಗ್ರಿ ಸೆಲ್ಸಿಯಸ್’ವರೆಗೂ ಇಳಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
