Vijaypura

ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ಅಂತ್ಯಕ್ರಿಯೆ; ಸಕಲ ಸರ್ಕಾರಿ ಗೌರವ; ಲಕ್ಷಾಂತರ ಭಕ್ತರು ಭಾವುಕ

Share

ಬಸವಾದಿ ಶರಣರ ವಚನಗಳನ್ನ ಜನರಿಗೆ ತಲುಪಿಸಿ ಲಿಂಗೈಕ್ಕರಾದ ನಾಡಿನ ಹಿರಿಯ ಸಂತ, 95 ವರ್ಷದ ತಪಸ್ವಿ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರಗಳೊಂದಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಿತು.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ‌ ವಿರಕ್ತಮಠದ ಚನ್ನಬಸವ ಶ್ರೀಗಳ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಶ್ರೀಗಳ ಜೋಳಿಗೆ ಹಿಡಿದು ಕಟ್ಟಿಸಿರುವ ವಚನಶಿಲಾ ಮಂಟಪದಲ್ಲಿ ಮಠಾಧೀಶರ ನೇತೃತ್ವದಲ್ಲಿ ಶ್ರೀಗಳ ಅಂತ್ಯ ಸಂಸ್ಕಾರ ನಡೆಯಿತು. ನಿನ್ನೆ ಸಂಜೆಯಿಂದ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಿಂದ ಲಕ್ಷಾಂತರ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಶ್ರೀಗಳ ಪಾರ್ಥಿವ ಶರೀರ ನೋಡಿ ಕಣ್ಣಿರು ಹಾಕಿದರು. ನಾಡಿನ ವಿವಿಧ ಮಠಾಧೀಶರು ಆಗಮಿಸಿ ಅಗಲಿದ ಹಿರಿಯ ಶ್ರೀ ಗಳಿಗೆ ನಮನ ಸಲ್ಲಿಸಿದರು. ಮಧ್ಯಾಹ್ನ ಗ್ರಾಮದಲ್ಲಿ ಶ್ರೀಗಳ ಮೆರವಣಿಗೆ ನಡೆಯಿತು. ಮಠದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಶ್ರೀಗಳ ಮೆರವಣಿಗೆಯಲ್ಲಿ ಭಾಗಿಯಾದರು.

ಸ್ವಾಮೀಜಿ ಮೆರವಣಿಗೆ ಬಳಿಕ ವಚನಶಿಲಾ ಮಂಟಪದ ಹೊರಭಾಗದಲ್ಲಿ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಂಬಿ ಪಾಟೀಲ್, ಶಿವಾನಂದ ಪಾಟೀಲ್, ಸಿಎಸ್ ನಾಡಗೌಡ, ರಾಜುಗೌಡ ಪಾಟೀಲ್ ಸೇರಿದಂತೆ, ಸ್ವಾಮೀಜಿಗಳು ಭಾಗಿಯಾಗಿದ್ದರು. ಚನ್ನಬಸವ ಸ್ವಾಮೀಜಿಗಳು ಶರಣರ ವಚನಗಳನ್ನ ಕಲ್ಲಿನಲ್ಲಿ‌ ಕೆತ್ತಿಸುವ ಮೂಲಕ ಮಹತ್ವದ ಕಾರ್ಯ ಮಾಡಿದ್ದಾರೆ. 96 ವರ್ಷ ಸರಳ ಜೀವನ ನಡೆಸಿದ ಶ್ರೀಗಳು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಮೆರವಣಿಗೆ ಬಳಿಕ ಸಂಜೆ ಮಠದ ಹೊರಭಾಗದಲ್ಲಿ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಬಳಿಕ ವಚನಶಿಲಾ ಮಂಟಪದಲ್ಲಿ ಸ್ವಾಮೀಜಿ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

 

Tags:

error: Content is protected !!