Vijaypura

ಬಸವತತ್ವಕ್ಕಾಗಿ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಿದ್ದ ಶ್ರೀಗಳು ಲಿಂಗೈಕ್ಯ; ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Share

ಬಸವ ತತ್ವದ ಪ್ರಚಾರಕರು ಹಾಗೂ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಮಠದ 97 ವರ್ಷದ ಪರಮಪೂಜ್ಯ ಶ್ರೀ ಚನ್ನಬಸವ ಸ್ವಾಮೀಜಿ ವಯೋಸಹಜ ಅನಾರೋಗ್ಯದಿಂದ ನಿನ್ನೆ ಮಠದಲ್ಲಿ ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಗಳ ನಿಧನಕ್ಕೆ ಉತ್ತರ ಕರ್ನಾಟಕದಾದ್ಯಂತ ಅಪಾರ ಸಂಖ್ಯೆಯ ಭಕ್ತರು ಮತ್ತು ಮಠಾಧೀಶರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಆಧ್ಯಾತ್ಮಿಕ ಮತ್ತು ಸಾಮಾಜಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಇನ್ನೂ ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬರುತ್ತಿದೆ. ಇಂದು ಸಾಯಂಕಾಲ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಶ್ರೀಗಳ ಭಕ್ತರಲ್ಲಿ ಶೋಕ ಮಡುಗಟ್ಟಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್….

ವಿಶ್ವಗುರು ಬಸವಣ್ಣನವರು ಜನಿಸಿದ ತವರಲ್ಲೇ ವಚನ ಶಿಲಾ ಮಂಟಪದ ನಿರ್ಮಾತೃ ಸ್ವಾಮೀಜಿ ಎಂದೇ ಕರೆಯಲ್ಪಡುತ್ತಿದ್ದ ಶ್ರೀ ಚನ್ನಬಸವ ಸ್ವಾಮೀಜಿ ಅವರು ಕೇವಲ ಮಠಾಧೀಶರಾಗಿರದೆ, ಬಸವಣ್ಣನವರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಮಹಾನ್ ಪ್ರಚಾರಕರಾಗಿದ್ದರು. ವಿಶೇಷವಾಗಿ, ಅವರು ಇಂಗಳೇಶ್ವರ ಮಠದ ಆವರಣದಲ್ಲಿ ವಚನ ಶಿಲಾ ಮಂಟಪವನ್ನು ನಿರ್ಮಿಸುವ ಮೂಲಕ ಬಸವಣ್ಣ ಮತ್ತು ಶರಣರ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಿ ಶಾಶ್ವತಗೊಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಇದು ಬಸವ ತತ್ವದ ಅಧ್ಯಯನಕಾರರಿಗೆ ಮತ್ತು ಭಕ್ತರಿಗೆ ಒಂದು ಪ್ರಮುಖ ತಾಣವಾಗಿದೆ. ಸರಳ ಜೀವನ ಮತ್ತು ಸಮಾಜಮುಖಿ ಚಿಂತನೆಗಳ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಅಪಾರ ಭಕ್ತರನ್ನು ಹೊಂದಿದ್ದ ಶ್ರೀಗಳು, ಲಿಂಗಾಯತ ಧರ್ಮದ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸ್ವಾಮೀಜಿಗಳ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ, ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಮಠಕ್ಕೆ ಆಗಮಿಸುತ್ತಿದ್ದು, ಮಠದ ಆವರಣದಲ್ಲಿ ಶೋಕ ಮಡುಗಟ್ಟಿದೆ. ಇನ್ನೂ ಸ್ವಾಮೀಜಿ ಅಗಲಿಕೆಗೆ ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಸಾಯಂಕಾಲ ಸರ್ಕಾರಿ ಗೌರವಗಳೊಂದಿಗೆ ಸ್ವಾಮೀಜಿಗಳ ಅಂತ್ಯಕ್ರಿಯೆ ನೆರವೇರಲಿದೆ.

ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಠದ ಪೀಠಾಧ್ಯಕ್ಷರು ಮತ್ತು ಹಿರಿಯ ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಂತ್ಯಕ್ರಿಯೆಯ ನಿರ್ಧಾರವನ್ನು ಪ್ರಕಟಿಸಲಾಗಿದೆ. ಅಂತ್ಯಕ್ರಿಯೆಯು ಇಂದು ಸಾಯಂಕಾಲ ಇಂಗಳೇಶ್ವರ ಮಠದ ಆವರಣದಲ್ಲಿ ನಡೆಯಲಿದೆ.
ವಿಜಯಪುರ, ಬಾಗಲಕೋಟ, ಕಲಬುರಗಿ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಸೇರಿದಂತೆ ನೆರೆಯ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ, ಸಾಂಗಲಿ, ಕೊಲ್ಹಾಪುರ ದಿಂದಲೂ ಭಕ್ತ ಸಾಗರ ಹರಿದು ಬರುತ್ತಿದೆ. ಭಕ್ತ ಸಮೂಹವು ಶಾಂತಿಯುತವಾಗಿ ಅಂತಿಮ ದರ್ಶನ ಪಡೆಯಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಠದ ಆಡಳಿತ ಮಂಡಳಿ ಮತ್ತು ಸ್ಥಳೀಯ ಪೊಲೀಸರು ಕೈಗೊಂಡಿದ್ದಾರೆ. ಗ್ರಾಮದಲ್ಲಿ ಸತತ ದಾಸೋಹ, ಭಜನೆ, ವಚನಗಳ ಮೂಲಕ ಶ್ರೀಗಳಿಗೆ ಗೌರವದ ಮೂಲಕ ಶೋಕದ ನಡುವೆ ವಿದಾಯ ಹೇಳಲು ಸಿದ್ಧತೆಗಳು ನಡೆಯುತ್ತಿವೆ.

ಬಸವನಾಡಿನ ಬಸವತತ್ವದ ಪ್ರಚಾರಕ್ಕಾಗಿ ಜೀವನವನ್ನೇ ಮುಡುಪಾಗಿರಿಸಿದ್ದ ಅತಿ ಹಿರಿಯ ಶ್ರೀಗಳನ್ನು ಕಳೆದುಕೊಂಡು ಶರಣರ ನಾಡು ಶೋಕಿತಗೊಂಡಿದೆ. ಶರಣರ ನಾಡಿನ ಹಿರಿಯ ಶ್ರೀಗಳು ಅಗಲಿದ್ದರಿಂದ ಬಸವ ನಾಡಿನ ಶರಣ ಸಂಸ್ಕೃತಿಯ ಕೊಂಡಿಯೊಂದು ಕಳಚಿದಂತಾಗಿದೆ.

Tags:

error: Content is protected !!