ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶದ ಕಟ್ಟೆ ಒಡೆದಿದ್ದು, ನಾಳೆ ಸುವರ್ಣಸೌಧಕ್ಕೆ ರೈತ ಸಾಗರ ಮುತ್ತಿಗೆ ಹಾಕಲಿದೆ. ರೈತರ ಆತ್ಮಹತ್ಯೆ ಮತ್ತು ಪರಿಹಾರ ವಿಳಂಬದ ಕುರಿತು ಬಿಜೆಪಿ ನಾಯಕರಾದ ಆರ್. ಅಶೋಕ ಹಾಗೂ ಬಿ.ವೈ. ವಿಜಯೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿಸೆಂಬರ್ 9 ರಂದು ಮಾಲಿನಿ ಸಿಟಿಯಲ್ಲಿ ರೈತರ ಪರವಾಗಿ ಬಿಜೆಪಿಯ ಪ್ರತಿಭಟನಾ ಸ್ಥಳವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಅವರು ಪರಿಶೀಲಿಸಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ರಾಜ್ಯ ಸರ್ಕಾರವು ಅನ್ನದಾತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಬೆಳೆಹಾನಿಯಾದರೂ ರೈತರಿಗೆ ಪರಿಹಾರ ಘೋಷಿಸದಿರುವುದು ಖಂಡನೀಯ. ಮುಖ್ಯಮಂತ್ರಿಗಳು ಕೇವಲ ವೈಮಾನಿಕ ಸಮೀಕ್ಷೆಗೆ ಸೀಮಿತವಾಗಿದ್ದಾರೆಯೇ ಹೊರತು, ಸಂಕಷ್ಟದಲ್ಲಿರುವ ರೈತನ ಕೈಹಿಡಿಯಲು ಮುಂದಾಗಿಲ್ಲ. ಈ ಸರ್ಕಾರಕ್ಕೆ ಜವಾಬ್ದಾರಿಯೇ ಇಲ್ಲದಂತಾಗಿದ್ದು, ಎಲ್ಲದಕ್ಕೂ ಕೇಂದ್ರದತ್ತ ಬೆರಳು ತೋರುತ್ತಾ ಕಾಲಹರಣ ಮಾಡುತ್ತಿದೆ. ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿರುವ ಸರ್ಕಾರದ ವಿರುದ್ಧ ನಾಳೆ ಎಲ್ಲಾ ಜಿಲ್ಲೆಗಳಿಂದ ಸುಮಾರು 20 ರಿಂದ 25 ಸಾವಿರ ರೈತರು ಒಗ್ಗೂಡಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. 138 ಶಾಸಕರ ಬಲವಿದ್ದರೂ ರೈತರಿಗೆ ನೀಡಲು ಖಜಾನೆಯಲ್ಲಿ ದುಡ್ಡಿಲ್ಲವೇ? ಹಣ ಎಲ್ಲಿ ಹೋಗುತ್ತಿದೆ? ಎಂದು ಅವರು ಖಡಕ್ ಆಗಿ ಪ್ರಶ್ನಿಸಿದರು.
ಇನ್ನು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಬಿಜೆಪಿ ನಾಯಕರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದರೂ ರೈತರ ಹಿತರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಇಂದು ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದು, ಸುಮಾರು 2,400 ಅನ್ನದಾತರು ಸಾವನ್ನಪ್ಪಿದ್ದರೂ ಸರ್ಕಾರಕ್ಕೆ ಜವಾಬ್ದಾರಿಯಿಲ್ಲ. ಕಾಂಗ್ರೆಸ್ ನಾಯಕರಿಗೆ ಅಧಿಕಾರದ ಮದ ಏರಿದ್ದು, ರೈತರ ಸಂಕಷ್ಟ ಆಲಿಸುವ ಬದಲು ಬ್ರೇಕ್ಫಾಸ್ಟ್ ಮೋಜಿನಲ್ಲಿ ಮುಳುಗಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ, ಆದರೆ ಕಾಂಗ್ರೆಸ್ಸಿಗರು ಮಾತ್ರ ಮಜಾ ಮಾಡುತ್ತಾ ‘ಜಾಲಿ’ಯಾಗಿದ್ದಾರೆ. ರೈತರ ಪರವಾಗಿ ಹೋರಾಟ ಮಾಡಲು ಬನ್ನಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ. ಬಿಜೆಪಿ ಸದಾ ರೈತರ ಪರವಾಗಿದ್ದು, ಈಗಾಗಲೇ ಸದನದಲ್ಲಿ ಈ ಕುರಿತು ನಿಲುವಳಿ ಸೂಚನೆಯನ್ನು ಮಂಡಿಸಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
