ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ಕೈಗೆ ಬರುವ ಹೊತ್ತಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಅಮಾನುಷ ಘಟನೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ನಡೆದಿದೆ


ಹಲಕುರ್ಕಿ ಗ್ರಾಮದ ರೈತ ಕನಕಪ್ಪ ಹಿರೇಹಾಳ ಎಂಬುವವರಿಗೆ ಸೇರಿದ ಸುಮಾರು 90 ಕ್ವಿಂಟಲ್ ಮೆಕ್ಕೆಜೋಳ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇದರ ಅಂದಾಜು ಮೌಲ್ಯ 2 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ರೈತ ಕನಕಪ್ಪ ಅವರು ಮೆಕ್ಕೆಜೋಳವನ್ನು ಕಟಾವು ಮಾಡಿ, ರಾಶಿ ಮಾಡುವ ಉದ್ದೇಶದಿಂದ ಹೊಲದಲ್ಲಿ ಸಂಗ್ರಹಿಸಿಟ್ಟಿದ್ದರು. ಆದರೆ, ರಾತ್ರಿ ವೇಳೆ ಹೊಲದಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು” ಎಂದು ರೈತ ಮಹಿಳೆ ಕಣ್ಣೀರಿಡುತ್ತಿರುವುದು ಮನಕಲಕುವಂತಿದೆ. ಇಡೀ ವರ್ಷದ ಕಷ್ಟ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.

ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
