ಕಾರ್ ಅಪಘಾತದಲ್ಲಿ ಸಿಪಿಐ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಇನ್ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು,ಗುರುತು ಸಿಗದಂತೆ ಸುಟ್ಟು ಕರಕಲಾಗಿದೆ.

ಕೈಯಲ್ಲಿನ ಉಂಗುರ ಮತ್ತು ಕಾರ್ ನಂಬರ್ ಮೇಲೆ ಮೃತದೇಹ ಗುರುತು ಪತ್ತೆ ಮಾಡಲಾಗಿದೆ. ಕರ್ತವ್ಯ ಮುಗಿಸಿ ಪತ್ನಿ ಮಕ್ಕಳನ್ನು ನೋಡಲು ಹೊರಟಾಗ ಅಪಘಾತ ನಡೆದಿದ್ದು, ಹಾವೇರಿಯಲ್ಲಿ ಕೆಲಸ ಮುಗಿಸಿ ಗದಗಕ್ಕೆ ಹೋಗುತ್ತಿದ್ದ ಸಿಪಿಐ ಸಾಲಿಮಠ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಹುಬ್ಬಳ್ಳಿ ಕಿಮ್ಸ್ನಲ್ಲಿ ಸಹಪಾಠಿಗಳು, ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಮುರಗೋಡ ನಿವಾಸಿಯಾಗಿರುವ ಸಾಲಿಮಠ ಅವರ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿ ನಡೆಸಲಾಗುತ್ತದೆ. ಮೃತ ಇನ್ಸ್ಪೆಕ್ಟರ್ ಪಂಚಾಕ್ಷರಿ ಅವರ ಅಂತಿಮ ದರ್ಶನವನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹಾಗೂ ಡಿಸಿಪಿ ಮಹಾನಿಂಗ ನಂದಗಾವಿ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಪಡೆದರು. ಮೃತರ ಕುಟುಂಬಕ್ಕೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಸಾಂತ್ವನ ಹೇಳಿದರು.
