ಉತ್ತರ ಕರ್ನಾಟಕ ಶಕ್ತಿದೇವಿ ಶ್ರೀರೇಣುಕಾ ಯಲ್ಲಮ್ಮನ ಸನ್ನಿಧಿಯಲ್ಲಿ ಇಂದು ಹೊಸ್ತಿಲ ಹುಣ್ಣಿಮೆಯ ವಿಧಾನವನ್ನು ನೆರವೇರಿಸಿ ಕಂಕಣ ವಿಸರ್ಜನೆ ಮಾಡಲಾಯಿತು.

ಉತ್ತರ ಕರ್ನಾಟಕ ಶಕ್ತಿದೇವತೆ ಸವದತ್ತಿಯ ಶ್ರೀ ರೇಣುಕಾ ಎಲ್ಲಮ್ಮನ ಕ್ಷೇತ್ರದಲ್ಲಿ ಇಂದು ಹೊಸ್ತಿಲ ಹುಣ್ಣಿಮೆಯ ಪೂಜಾ ವಿಧಾನ ನೆರವೇರಿಸಲಾಯಿತು. ಈ ಹುಣ್ಣೆಮೆಯಂದು ದೇವಿಯ ಕಂಕಣವನ್ನು ವಿಸರ್ಜಿಸಲಾಗುತ್ತದೆ. ದೇವಸ್ಥಾನದ ಅರ್ಚಕ ಮಹಾಂತೇಶ ಹಿರೇಮಠ ಸೇರಿ ಹಲವು ಪೂಜಾರಿಗಳ ಉಪಸ್ಥಿತಿಯಲ್ಲಿ ಬೆಳಿಗ್ಗೆಯಿಂದಲೇ ಗಣ ಹೋಮ, ಶಾಂತಿ ಹೋಮ ವಿಶೇಷ ಪೂಜಾಕೈಂಕರ್ಯಗಳು ನಡೆದವು. ಹೊಸ್ತಿಲ ಹುಣ್ಣಿಮೆಯನ್ನು ಬಳೆ ಒಡೆಯುವ ಹುಣ್ಣಿಮೆಯಂದು ಕರೆಯುತ್ತಾರೆ. ದೇವಲೋಕದಿಂದ ಜಗತ್ ಕಲ್ಯಾಣಕ್ಕಾಗಿ ರೇಣುಕೆ ಯಲ್ಲಮ್ಮಳ ಪತಿ ಜಮದಗ್ನಿಗೆ ನೀಡಿದ ಕಾಮಧೇನುವನ್ನು ಕಾರ್ತವೀರ್ಯಾಜುನನು ಹೊಸ್ತಿಲ ಹುಣ್ಣಿಮೆಯ ದಿನ ಬಲವಂತವಾಗಿ ಪಡೆಯಲು ಮುಂದಾಗುತ್ತಾರೆ. ಆದರೇ ಮದೋನ್ಮತ್ತನಿಗೆ ಕಾಮಧೇನು ನೀಡಿದರೇ ಸತ್ಕಾರ್ಯಕ್ಕೆ ಬಳಕೆಯಾಗಲ್ಲ. ಆದುದರಿಂದ ಅದನ್ನ ನೀಡುವುದಿಲ್ಲ ಎಂದಿದ್ದಕ್ಕೆ, ಕಾರ್ತವಿರ್ಯಾಜುನನು 21 ಬಾರಿ ಜಮದಗ್ನಿ ಮುನಿಗೆ ಕತ್ತಿಯಿಂದ ಇರಿದು ಘಾಸಿಗೊಳಿಸುತ್ತಾನೆ. ಮೃತ್ಯುವಿನ ಅಂಗಳದಲ್ಲಿದ್ದ ತಂದೆ ಜಮದಗ್ನಿಗಾಗಿ 21 ಬಾರಿ ಜಗತ್ ಭ್ರಮಣ ನಡೆಸಿ ಪರಶುರಾಮನು ಸಂಜೀವಿನಿ ತಂದು ಕೊಡುತ್ತಾನೆ. ಇದಕ್ಕೆ ಸುಮಾರು 30 ದಿನಗಳು ಗತಿಸುತ್ತವೆ. ಆವಾಗ ದೇವಿಯ ಕಂಕಣ ವಿಸರ್ಜಿತವಾಗಿರುತ್ತದೆ. ಮುಂದಿನ ಮುತೈದೆ ಹುಣ್ಣಿಮೆಗೆ ಜಮದಗ್ನಿ ಮುನಿ ಮೃತ್ಯು ಸಂಜೀವಿನಿ ಪಡೆದು ಮರು ಜನ್ಮತಾಳುತ್ತಾರೆ. ಇದುವೇ ಮುಂಬರುವ ಮುತೈದೆ ಹುಣ್ಣಿಮೆ. ತ್ರಿಮೂರ್ತಿಗಳಿಂದ ಅಂದು ತಾಯಿ ರೇಣುಕೆ ರಾಜಮುತೈದೆಯಾಗುತ್ತಾಳೆ. ಯಲ್ಲಮ್ಮನನ್ನು ಆರಾಧಿಸುವ ಜೋಗಪ್ಪ-ಜೋಗತಿಯರು ಒಂದು ತಿಂಗಳ ಕಾಲ ಬಳೆಗಳನ್ನು ಒಡೆದುಕೊಂಡು ಇಂದಿಗೂ ಈ ಪ್ರಥೆಯನ್ನು ಆಚರಿಸುತ್ತಾರೆ. ನಂತರ ಮುತ್ತೈದೆ ಹುಣ್ಣಿಮೆಗೆ ಗೋಡಚಿಯಿಂದ ಅಣ್ಣ ವೀರಭದ್ರೇಶ್ವರ ನೀಡುವ ಅರಶಿಣ ಕುಂಕುಮ ತಂದು ತಾಯಿಗೆ ಮುತೈದೆ ಶೃಂಗಾರ ಮಾಡುತ್ತಾರೆ. ಈ ದಿನ ಯಲ್ಲಮ್ಮನ ಗುಡ್ಡದಲ್ಲಿ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಕಾಣ ಸಿಗುತ್ತದೆ.


