Dharwad

ಕೊನೆಗೂ ಸುಖಾಂತ್ಯಗೊಂಡ ಧಾರವಾಡ ಕಮಲಾಪುರ ಸ್ಮಾಶನ ಭೂಮಿ ಸಮಸ್ಯೆ….

Share

ಧಾರವಾಡದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ರುದ್ರಭೂಮಿ ಪ್ರಕರಣವೊಂದು ಕೊನೆಗೂ ಸುಖಾಂತ್ಯ ಕಂಡಿದೆ. ಕಳೆದೊಂದು ವಾರದಿಂದ ನಗರದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿ, ಭೂಮಿಯ ಮಾಲಿಕರ ಮತ್ತು ಸ್ಥಳೀಯರ ನಡುವಿನ ತಿಕ್ಕಾಟಕ್ಕೂ ಕಾರಣವಾಗಿತ್ತು. ಇದು ಸಜಹವಾಗಿ ಜಿಲ್ಲಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಆದರೆ ಇದೀಗ ಭೂಮಿಯ ಮಾಲಿಕನ ಸಣ್ಣ ತ್ಯಾಗದಿಂದಾಗಿ ಜನರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಅದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಧಾರವಾಡದ ಕಮಲಾಪುರ ಸೇರಿ ಅಕ್ಕಪಕ್ಕದವರ ಪರದಾಟಕ್ಕೆ ಕಾರಣವಾಗಿದ್ದ ಸ್ಮಶಾನ ಸಮಸ್ಯೆ ಸುಖಾಂತ್ಯ.

ಭೂ ಮಾಲಿಕರ ತ್ಯಾಗದಿಂದ ನಿಟ್ಟುಸಿರು ಬಿಟ್ಟ ಸ್ಥಳೀಯ ನಿವಾಸಿಗಳು

ಭೂ ಮಾಲೀಕರಾದ ಮಲಿಕಾರ್ಜುನರವರು 1 ಎಕರೆ 15 ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ದಾನ ನೀಡಲು ನಿರ್ಧಾರ, ಸ್ಥಳೀಯರಲ್ಲಿ ಸಂತಸ.

ಇದು ಧಾರವಾಡ ನಗರದ ಕಮಲಾಪುರ ಬಡಾವಣೆಯಲ್ಲಿ ಬಳಿ ಇರೋ ರುದ್ರಭೂಮಿ. 78/2 ಸರ್ವೆ ನಂಬರ್ ನ ಈ ಭೂಮಿ ಕ್ಷೇತ್ರ 4 ಎಕರೆ 15 ಗುಂಟೆ ಇದೆ. ಈ ಜಮೀನಿನಲ್ಲಿಯೇ ಕಳೆದ ನೂರಾರು ವರ್ಷಗಳಿಂದ ಕಮಲಾಪುರ, ಮಾಳಾಪುರ, ನಾರಾಯಣಪೂರ, ಪತ್ರೇಶ್ವರ ನಗರ ಮತ್ತು ಮರಾಠಾ ಗಲ್ಲಿ ಜನರು ಮೃತರ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಈ ಜಮೀನು ಇದೀಗ ಮಲ್ಲಿಕಾರ್ಜುನಯ್ಯ ಹಿರೇಮಠ ಅನ್ನೋರ ಹೆಸರಿನಲ್ಲಿದೆ. ಆದರೆ ಅಲ್ಲಿಯೇ ನೂರಾರು ವರ್ಷಗಳಿಂದ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದರಿಂದ ಆ ಭೂಮಿಯನ್ನು ರುದ್ರಭೂಮಿಯನ್ನಾಗಿ ಇರಲು ಬಿಡುವಂತೆ ಸ್ಥಳೀಯರು ಆಗ್ರಹಿಸಿದ್ದರು. ಇದಕ್ಕೆ ಕಾರಣ ಮಾಲಿಕ ಅದನ್ನು ಬೇರೆಯವರಿಗೆ ಮಾರಾಟ ಮಾಡಲು ಯೋಚಿಸಿದ್ದಾರೆ ಅನ್ನೋ ಮಾಹಿತಿ. ಒಂದು ವೇಳೆ ಆ ಭೂಮಿಯನ್ನು ಮಾರಾಟ ಮಾಡಿದರೆ, ಅಲ್ಲಿ ನಿವೇಶನಗಳು ಆಗುತ್ತವೆ. ಹೀಗಾದರೆ ಜನರಿಗೆ ತಮ್ಮವರ ಅಂತ್ಯಸಂಸ್ಕಾರಕ್ಕೆ ಜಾಗವೇ ಇರೋದಿಲ್ಲ ಅನ್ನೋ ಆತಂಕ ಶುರುವಾಗಿತ್ತು. ಈ ಕಾರಣಕ್ಕೆ ದೊಡ್ಡ ಹೋರಾಟವನ್ನು ಮಾಡಿದ್ದ ಸ್ಥಳೀಯರು, ಆ ಭೂಮಿಗೆ ಒಂದು ಫಲಕವನ್ನೂ ಹಾಕಿ, ಅದರಲ್ಲಿ ಯಾರೂ ಇದನ್ನು ಖರೀದಿಸಬೇಡಿ ಅಂತಾ ಎಚ್ಚರಿಕೆ ಕೊಟ್ಟಿದ್ದರು. ಆದರೆ ಇದೀಗ ಮಾಲಿಕರು, ಸ್ಥಳೀಯರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಹಿರೇಮಠ ಅವರು 1 ಎಕರೆ 15 ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ದಾನ ನೀಡಲು ನಿರ್ಧರಿಸಿದರು. ಇದರಿಂದಾಗಿ ಕಳೆದ ಹಲವಾರು ದಿನಗಳಿಂದ ಉಂಟಾಗಿದ್ದ ಕಗ್ಗಂಟು ಬಿಡಿಸಿದಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿನ ಭೂಮಿಯ ದರ ಎತ್ತರಕ್ಕೇರಿದೆ. ಎಕರೆಗೆ ಕನಿಷ್ಟ 3 ಕೋಟಿ ರೂಪಾಯಿಗೆ ಇಲ್ಲಿನ ಜಮೀನು ಮಾರಾಟವಾಗುತ್ತಿವೆ. ಇದೇ ಕಾರಣಕ್ಕೆ ಈ ಜಮೀನನ್ನು ಮಾರಾಟ ಮಾಡಲು ಮಲ್ಲಿಕಾರ್ಜುನ ಪ್ರಯತ್ನ ಮಾಡಿದ್ದರು. ಈ ವಿಷಯ ಗೊತ್ತಾಗಿ ಸ್ಥಳೀಯರು ಅದರಲ್ಲಿನ ಕೊಂಚ ಭಾಗವನ್ನು ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅದಕ್ಕೆ ಮಾಲಿಕರು ಒಪ್ಪಿರಲಿಲ್ಲ. ಆದರೆ ಇದೀಗ ಜನರ ಒತ್ತಡಕ್ಕೆ ಮಾಲಿಕರು ಮಣಿದಿದ್ದಾರೆ. ಕೊನೆಗೂ ಕೊಂಚ ಭಾಗವನ್ನು ಮಹಾನಗರ ಪಾಲಿಕೆಗೆ ದಾನವಾಗಿ ನೀಡಿ, ಅದನ್ನು ರುದ್ರಭೂಮಿಯನ್ನಾಗಿ ಬಳಸಲು ಅನುವು ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಧಾರವಾಡ ತಹಶೀಲ್ದಾರ್ ಅವರಿಗೆ ದಾನದ ಮುಂದಿನ ಪ್ರಕ್ರಿಯೆಯನ್ನು ಆರಂಭಿಸುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಆ ಪ್ರಕ್ರಿಯೆ ಆರಂಭವಾಗಲಿದೆ. ಈ ಮಧ್ಯೆ ಅನೇಕ ಕಡೆಗಳಲ್ಲಿ ಇಂಥದ್ದೇ ಸಮಸ್ಯೆಗಳು ಬರುತ್ತಿರೋದ್ರಿಂದ ಕಂದಾಯ ಇಲಾಖೆ ಅಧಿಕಾರಿಗಳು ಹೈರಾಣಾಗಿ ಹೋಗಿದ್ದಾರೆ. ಆದರೆ ಕಳೆದ ಹಲವಾರು ದಿನಗಳಿಂದ ದೊಡ್ಡ ತಲೆನೋವಾಗಿದ್ದ ಈ ಪ್ರಕರಣ ಇಷ್ಟು ಸುಲಭವಾಗಿ ಪರಿಹಾರವಾಗುತ್ತೆ ಅಂತಾ ಯಾರೂ ನಂಬಿರಲಿಲ್ಲ. ಆದರೆ ಇದೀಗ ಸಮಸ್ಯೆ ಪರಿಹಾರವಾಗಿದ್ದಕ್ಕೆ ಭೂಮಿ ಮಾಲಿಕರಿಗೆ ತಹಸೀಲ್ದಾರ್ ಅವರು ಕೂಡ ಧನ್ಯವಾದ ಸಲ್ಲಿಸಿದ್ದಾರೆ.

ಈ ಪ್ರದೇಶದಲ್ಲಿ ಅಂತ್ಯಸಂಸ್ಕಾರಕ್ಕೆ ಸಾಕಷ್ಟು ಸಮಸ್ಯೆ ಇದೆ. ಆದರೆ ಇದೀಗ ಕೋಟ್ಯಾಂತರ ರೂಪಾಯಿ ಬೆಲೆಯ ಭೂಮಿಯನ್ನು ದಾನವಾಗಿ ನೀಡಿರೋದು ಅಚ್ಚರಿಯ ಸಂಗತಿಯೇ. ಅಲ್ಲದೇ ಅದೂ ರಸ್ತೆಯ ಭಾಗದಲ್ಲಿರೋ ಭೂಮಿಯನ್ನು ಸಾರ್ವಜನಿಕರಿಗೆ ದಾನವಾಗಿ ನೀಡಿರೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಒಟ್ಟಿನಲ್ಲಿ ಹಲವಾರು ದಿನಗಳಿಂದ ಕಗ್ಗಂಟಾಗಿದ್ದ ಸಮಸ್ಯೆಯೊಂದು ಸರಳ ರೀತಿಯಲ್ಲಿ ಮುಕ್ತಾಯವಾಗಿದ್ದು ಸ್ಥಳೀಯರನ್ನು ನಿಟ್ಟುಸಿರು ಬೀಡುವಂತೆ ಮಾಡಿದೆ.

Tags:

error: Content is protected !!