ವಿಜಯಪುರ…
ಕಾರ್ತಿಕ ಮಾಸದ ಪವಿತ್ರ ಛಟ್ಟಿ ಅಮವಾಸ್ಯೆ ಪ್ರಯುಕ್ತ ಗುಡ್ಡಾಪುರದಲ್ಲಿನ ಅನ್ನದಾಸೋಹಿ ತ್ರಿಕಾಲಪೂಜಿತೆ ದಾನಮ್ಮದೇವಿ ದೇವಾಲಯಕ್ಕೆ ಪಾದಯಾತ್ರೆಯ ಜೋರು ಆರಂಭವಾಗಿದೆ. ನಾಳೆ
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಸುಕ್ಷೇತ್ರ ಗುಡ್ಡಾಪುರದಲ್ಲಿ ನಡೆಯಲಿರುವ ಕಾರ್ತಿಕೋತ್ಸವದಲ್ಲಿ ಭಾಗವಹಿಸಲು ಭಕ್ತಸಾಗರವೇ ಸಾಗುತ್ತಿರುವ ದೃಶ್ಯ ಎಲ್ಲೆಡೆ ಕಾಣುತ್ತಿದೆ. ವಿಜಯಪುರ ನಗರದಿಂದಲೇ ಸಾವಿರಾರು ಭಕ್ತರು ದಾನಮ್ಮದೇವಿ ದರ್ಶನಕ್ಕಾಗಿ ನಡಿಗೆಯ ಮಹಾಯಾತ್ರೆಯನ್ನು ಪ್ರಾರಂಭಿಸಿದ್ದು, ಮಧ್ಯಾಹ್ನದ ಬಿಸಿಲಿನಲ್ಲೂ, ನಸುಕಿನ ಚಳಿಗಾಲದಲ್ಲೂ ಭಕ್ತಿ ಶ್ರದ್ಧೆಯೊಂದಿಗೆ ಪಾದಯಾತ್ರೆ ಮುಂದುವರಿಸುತ್ತಿದ್ದಾರೆ. ರಾಯಚೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳ ಜೊತೆಗೆ ನೆರೆ ರಾಜ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಭಕ್ತರೂ ಗುಡ್ಡಾಪುರಕ್ಕೆ ಆಗಮಿಸುತ್ತಿದ್ದಾರೆ.

ಸುಕ್ಷೇತ್ರ ಗುಡ್ಡಾಪುರದ ದಾನಮ್ಮದೇವಿ ದೇವತೆಗೆ ಕರ್ನಾಟಕದಿಂದಲೇ 90% ಭಕ್ತರು ಆರಾಧಿಸುವ ದೇವರು ಎಂಬ ಗೌರವ ಹೊಂದಿದ ಕಾರಣ ಲಕ್ಷಾಂತರ ಭಕ್ತರು ತಾಯಿಯ ದರ್ಶನಕ್ಕಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಕ್ತರ ಸೌಲಭ್ಯಕ್ಕಾಗಿ ಸಂಘ–ಸಂಸ್ಥೆಗಳು ಹಾಗೂ ದಾನಿಗಳು ಕುಡಿಯುವ ನೀರು, ಉಪಹಾರ ವ್ಯವಸ್ಥೆ, ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿದ್ದು, ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯೂ ಮಾಡಲಾಗಿದೆ. ಅಹಿತಕರ ಘಟನೆಗಳು ಸಂಭವಿಸದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪಾದಯಾತ್ರಿಕರಿಗೆ ತೊಂದರೆ ಆಗದಂತೆ ಹಲವು ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ

