ಸರ್ಕಾರಿ ಶಾಲಾ, ಕಾಲೇಜು ಹಾಗೂ ಜಾಗಗಳಲ್ಲಿ ಸಂಘ, ಸಂಸ್ಥೆಗಳು ಏನಾದರೂ ಕಾರ್ಯಕ್ರಮ ನಡೆಸಬೇಕಾದರೆ ಸರ್ಕಾರದ ಪರವಾನಿಗಿ ಪಡೆಯಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ಮತ್ತೆ ಮುಂದುವರಿಕೆಯಾಗಿದೆ.
ಸರ್ಕಾರದ ಈ ಆದೇಶ ಪ್ರಶ್ನಿಸಿ ಪುನಶ್ಚೇತನ ಸಂಸ್ಥೆ ಸೇರಿದಂತೆ ಮೂವರು ಧಾರವಾಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಧಾರವಾಡ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ನ.17ಕ್ಕೆ ಅರ್ಜಿಯ ವಿಚಾರಣೆ ಮುಂದೂಡಿ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇಂದು ಅರ್ಜಿಯ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಂಡ ಹೈಕೋರ್ಟ್‌ನ ಏಕಸದಸ್ಯ ಪೀಠವು, ಮಧ್ಯಂತರ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲ ಕಾಲಾವಕಾಶ ನೀಡಿ ಪ್ರಕರಣದ ವಿಚಾರಣೆಯನ್ನು ಡಿ.15ಕ್ಕೆ ಮತ್ತೆ ಮುಂದೂಡಿದೆ. ಅಲ್ಲಿಯವರೆಗೂ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ಮುಂದುವರೆಯಲಿದೆ. ರಾಜ್ಯ ಸರ್ಕಾರದ ಪರ ವಕೀಲರು ಎಜಿ ಶಶಿಕಿರಣ್ ಶೆಟ್ಟಿ ಅವರು ಮಧ್ಯಂತರ ತಡೆಯಾಜ್ಞೆಗೆ ತಕರಾರು ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ್ದರು. ಅದಕ್ಕೆ ಅವಕಾಶ ಕೊಟ್ಟ ಧಾರವಾಡ ಹೈಕೋರ್ಟ್, ದ್ವಿಸದಸ್ಯ ಪೀಠದಲ್ಲಿ ಅರ್ಜಿ ವಜಾ ಆಗಿದ್ದಕ್ಕೆ ಸುಪ್ರೀಂ ಕೋರ್ಟ್‌ಗೆ ಯಾಕೆ ಹೋಗಲಿಲ್ಲ ಎಂದು ಪ್ರಶ್ನೆ ಮಾಡಿದೆ. ಇನ್ನೂ ಸುಪ್ರೀಂ ಕೋರ್ಟ್‌ಗೆ ಹೊಗಲು ನಿರ್ಧಾರ ಮಾಡಿಲ್ಲ ಎಂದು ಎಜಿ ಹೈಕೋರ್ಟ್ ಪೀಠಕ್ಕೆ ತಿಳಿಸಿದರು. ಈ ಅರ್ಜಿಯ ವಿಚಾರಣೆಗೆ ಎಜಿ ಅವರು ವೀಡಿಯೋ ಕಾನ್ಫರನ್ಸ್ ಮುಖಾಂತರ ಕೋರ್ಟ್‌ಗೆ ಹಾಜರಾಗಿದ್ದರು.

