ಇದು ಐತಿಹಾಸಿಕ ಗ್ರಾಮವಾದರೂ ಸ್ವಚ್ಛತೆಯ ಅಭಾವದಿಂದ ಇಂದು ಸುದ್ಧಿಯಲ್ಲಿದೆ. ಇಲ್ಲಿ ಹಲವಾರು ಕೈಗಾರಿಕೆಗಳು, ಇಂಟರ್ ನ್ಯಾಷನಲ್ ಹೋಟೆಲ್’ಗಳು ತಲೆ ಎತ್ತಿದರೂ ಗ್ರಾಮದ ಪ್ರವೇಶದಲ್ಲೇ ಅಸ್ವಚ್ಛತೆ ತಾಂಡವವಾಡುತ್ತಿದ್ದು, ಜನರಲ್ಲಿ ಬೇಸರ ಮೂಡಿಸಿದೆ.
ಹೌದು, ಬೆಳಗಾವಿ ತಾಲೂಕಿನ ಕಾಕತಿ ಒಂದು ಪ್ರಸಿದ್ಧ ಗ್ರಾಮ. ಇದು ರಾಣಿ ಚೆನ್ನಮ್ಮನ ಹುಟ್ಟೂರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ಗ್ರಾಮದ ಪ್ರವೇಶದಲ್ಲಿ ಹಲವಾರು ಕೈಗಾರಿಕೆಗಳು, ಪಂಚತಾರಾ ಹೋಟೆಲ್’ಗಳು ತಲೆ ಎತ್ತಿವೆ. ಅಲ್ಲದೇ ಇದೇ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಿದ್ದು, ಮೇಲ್ಸೇತುವೆಗಳನ್ನು ಹೊಂದಿದೆ. ಆದರೇ, ಕೆಲ ಜನರು ಈ ಊರಿನ ಪಾವಿತ್ರ್ಯತೆಯನ್ನು ಕಾಪಾಡುತ್ತಿಲ್ಲ. ಈ ಮೇಲ್ಸೇತುವೆಯ ಅಕ್ಕಪಕ್ಕ ಮಿನಿ ಕಚರಾ ಡಿಪೋಗಳು ನಿರ್ಮಾಣಗೊಂಡಿವೆ. ಇಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪಂಚತಾರಾ ಹೋಟೆಲ್’ಗಳಿಗೆ ಹೋಗುವ ಪ್ರಮುಖ ಸೇತುವೆಯ ಪಕ್ಕದ ಸರ್ವಿಸ್ ರಸ್ತೆ ಕಸದ ದೊಡ್ಡ ರಾಶಿ ಬಿದ್ದಿದ್ದು, ಗಬ್ಬು ವಾಸನೆ ಬೀರುತ್ತಿದೆ. ಇದರಿಂದಾಗಿ ಪರಿಸರ ಮಾಲಿನ್ಯ ಉಂಟಾಗಿ ಗ್ರಾಮದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ. ಈ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯಿತಿ ಏಕೆ ಎಚ್ಚೆತ್ತುಕೊಂಡಿಲ್ಲ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸುವ ಇಂತಹ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಗ್ರಾಮ ಪಂಚಾಯತ್’ನ ಪ್ರಥಮ ಕರ್ತವ್ಯವಾಗಿದೆ. ಕೂಡಲೇ ಗ್ರಾಮ ಪಂಚಾಯತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಸವನ್ನು ವಿಲೇವಾರಿ ಮಾಡಿ, ಇಲ್ಲಿ ಯಾರೂ ಕಸ ಎಸೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ಪ್ರವಾಸಿಗರು ಆಗ್ರಹಿಸಿದ್ದಾರೆ.

