


ಚುನಾವಣೆ ವೇಳೆ ಬರುವ ಮನಸ್ತಾಪ, ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟು, ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಹಕಾರಿ ತತ್ವ, ಆದರ್ಶದಡಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ.
ಹಿರೇಬಾಗೇವಾಡಿಯ ಶ್ರೀ ಜಾಲಿಕರೆಮ್ಮ ದೇವಿ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ-2025 ರ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಹಕಾರಿ ರಂಗದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಈ ವೇಳೆ ವೈಯಕ್ತಿಕ ಮನಸ್ತಾಪಗಳನ್ನು ಬದಿಗಿಟ್ಟು ಕೆಲಸ ಮಾಡಬೇಕಿದೆ. ಆಗಷ್ಟೇ ನಾವು ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಸಾಧ್ಯ ಎಂದು ಹೇಳಿದರು.
ಬೆಳಗಾವಿ ತಾಲೂಕಿನಿಂದ ರಾಹುಲ್ ಜಾರಕಿಹೊಳಿ ಅವರನ್ನು ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ನಿರ್ದೇಶಕರನ್ನಾಗಿ ಮಾಡಲಾಗಿದೆ. ಅವರೊಂದಿಗೆ ಕೈಜೋಡಿಸಿ ರೈತರ ಪರ ಕೆಲಸ ಮಾಡಲಾಗುವುದು. ಸರ್ಕಾರ ಹಾಗೂ ಸಹಕಾರ ಮಟ್ಟದಲ್ಲೂ ಕೆಲಸ ಮಾಡಿಕೊಡುವೆ. ಇಂಥಹ ಸಪ್ತಾಹ ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಚನ್ನರಾಜ್ ಹಟ್ಟಿಹೊಳಿ ತಿಳಿಸಿದರು.
ದೇವರ ಆಶೀರ್ವಾದ ಹಾಗೂ ಎಲ್ಲರ ಸಹಕಾರದಿಂದ ಸಹಕಾರ ಕ್ಷೇತ್ರಕ್ಕೆ ಪ್ರವೇಶಿಸಿರುವೆ. ಬಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದು, ಮಲಪ್ರಭ ಸಕ್ಕರೆ ಕಾರ್ಖಾನೆಗೆ ಅಧ್ಯಕ್ಷನಾಗಿರುವೆ. ಒಳ್ಳೆಯ ಕೆಲಸ ಕಾರ್ಯಗಳು ಸಹಕಾರಿ ರಂಗದಲ್ಲಿ ಆಗುತ್ತಿವೆ. ರೈತರ ಪಾಲಿಗೆ ಸಹಕಾರ ಬ್ಯಾಂಕ್‌ಗಳು ಆರ್ಥಿಕ ಶಕ್ತಿಯಾಗಿವೆ ಎಂದು ಹೇಳಿದರು.
ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ರೈತರು ಸಾಲ ಪಡೆಯಲು ನೂರೊಂದು ನಿಯಮಗಳನ್ನು ಎದುರಿಸಬೇಕು, ಆದರೆ, ಸಹಕಾರಿ ಬ್ಯಾಂಕ್‌ಗಳಲ್ಲಿ ನಿಯಮಗಳನ್ನು ಸಡಿಲಿಸಿ ಸಾಲ ನೀಡಲಾಗುತ್ತಿದೆ. ನರ್ಸರಿ ಮಾಡಲು, ಹೈನುಗಾರಿಕೆ ಸೇರಿದಂತೆ ಹಲವು ಸ್ವಯಂ ಉದ್ಯೋಗದಲ್ಲಿ ತೊಡಗಿಸಲು ಸಹಕಾರಿ ಬ್ಯಾಂಕ್‌ಗಳಲ್ಲಿ ನೆರವು ನೀಡಲಾಗುತ್ತಿದೆ. ರೈತರಿಗೆ ಶೂನ್ಯಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ಸಹಕಾರಿ ರಂಗ ತನ್ನದೇ ಆದ ನಿಟ್ಟಿನಲ್ಲಿ ಮುಂದುವರಿತಾ ಇದೆ. ಹಳ್ಳಿಯಿಂದ ದೆಹಲಿವರೆಗೂ ಸಹಕಾರಿ ರಂಗ ವಿಸ್ತಾರಗೊಂಡಿದ್ದು, ಸಹಕಾರಿ ರಂಗದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ಚನ್ನರಾಜ್ ಹಟ್ಟಿಹೊಳಿ ತಿಳಿಸಿದರು.
ಈ ವೇಳೆ ಸಂತೋಷ ಅಂಗಡಿ, ಬಸಗೌಡ ಪಾಟೀಲ, ಶಂಕರಗೌಡ ಪಾಟೀಲ, ಶಿವನಗೌಡ ಪಾಟೀಲ, ಹಾಲಪ್ಪ ಜಗ್ಗಿನವರ, ರವೀಂದ್ರ ಮೇಳೆದ್, ರಘು ಪಾಟೀಲ, ಭರಮಪ್ಪ ಶೀಗಿಹಳ್ಳಿ, ರಾಮಣ್ಣ ಗುಳ್ಳಿ, ಮುಶೆಪ್ಪ ಹಟ್ಟಿ, ಮಹಾಂತೇಶ ಅಲಾಬಾದಿ, ಸುರೇಶ ಇಟಗಿ, ಬಸನಗೌಡ ಪಾಟೀಲ, ಚಂದ್ರಪ್ಪ ಶಿಂತ್ರಿ, ಗ್ರಾಮದ ಅನೇಕ ಮುಖಂಡರು, ಹಿರಿಯರು ಉಪಸ್ಥಿತರಿದ್ದರು.

