Uncategorized

ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾತೃ: ಮುಖ್ಯಮಂತ್ರಿ ಸಿದ್ದರಾಮಯ್ಯ

Share

ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರು ಆಧುನಿಕ ಭಾರತದ ನಿರ್ಮಾತೃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಮಾಜಿ ಪ್ರಧಾನಮಂತ್ರಿಗಳಾದ ದಿವಂಗತ ಪಂಡಿತ್ ಜವಾಹಾರಲಾಲ್ ನೆಹರು ರವರ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರ ಜನ್ಮದಿನದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಕ್ಕಳನ್ನು ಕಂಡರೆ ಬಹಳ ಪ್ರೀತಿಯಿದ್ದ ಅವರು ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು ಎಂದು ಅರ್ಥೈಸಿಕೊಂಡಿದ್ದರು. ಆದ್ದರಿಂದ ಚಾಚಾ ನೆಹರೂ ಎಂದೇ ಅವರನ್ನು ಕರೆಯಲಾಗುತ್ತಿತ್ತು ಎಂದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ದೇಶ ಪ್ರೇಮ ಹಾಗೂ ಸ್ವಾತಂತ್ರ್ಯ ಪ್ರೇಮಗಳನ್ನು ಬೆಳೆಸಿಕೊಂಡಿದ್ದರು. ಬ್ರಿಟಿಷರ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಂಡು ಮಹಾತ್ಮ ಗಾಂಧಿಯವರ ನೆಚ್ಚಿನ ಶಿಷ್ಯರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಸುಮಾರು 9 ವರ್ಷಗಳ ಕಾಲ ಕಾರಾಗೃಹದಲ್ಲಿದ್ದು ದೇಶಕ್ಕಾಗಿ ಬಹಳಷ್ಟು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ದೇಶದ ಬಜೆಟ್ ಗಾತ್ರ 197 ಕೋಟಿ ರೂ. ಗಳು ಮಾತ್ರ ಇತ್ತು. ಎರಡು ಮೂರು ವರ್ಷಗಳ ನಂತರ 4 ಅಂಕಿಗಳ ಹಂತಕ್ಕೆ ತಲುಪಿತು ಎಂದರು.

ಕೃಷಿ, ನೀರಾವರಿ, ಕೈಗಾರಿಕೆಗಳಲ್ಲಿ ಆಸಕ್ತಿ ಹೊಂದಿದ್ದ ನೆಹರೂ ಅವರು ದೇಶವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸುವ ಪ್ರಯತ್ನ ಮಾಡಿದರು. ಪಂಚ ವಾರ್ಷಿಕ ಯೋಜನೆಗಳ ಮೂಲಕ ದೇಶ ಕಟ್ಟುವ ಕೆಲಸವನ್ನು ಮಾಡಿದರು. ದೇಶದಲ್ಲಿ ಅನೇಕ ಕೈಗಾರಿಕೆಗಳಾಗಿದ್ದರೆ, ಅಣೆಕಟ್ಟುಗಳಾಗಿದ್ದರೆ, ಕೃಷಿಯಲ್ಲಿ ಸ್ವಾವಲಂಬಿಗಳಾಗಿದ್ದರೆ ಅದಕ್ಕೆ ನೆಹರೂ ಅವರು ಕಾರಣ ಎಂದು ಸ್ಮರಿಸಬೇಕು. ಸುದೀರ್ಘ ಹದಿನೇಳು ವರ್ಷಗಳ ಕಾಲ ಈ ದೇಶದ ಪ್ರಧಾನಿಗಳಾಗಿದ್ದವರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

ಬಿಜೆಪಿಗೆ ಗಾಂಧಿ ಹಾಗೂ ನೆಹರೂ ಅವರನ್ನು ತೆಗಳುವುದೇ ಕೆಲಸ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಪಾತ್ರವೇ ಇಲ್ಲ. ಮಹಾತ್ಮ ಗಾಂಧಿ, ನೆಹರೂ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಅವರನ್ನು ತೆಗಳಿ, ಇಲ್ಲದ ಆರೋಪಗಳನ್ನು ಹೊರಿಸುವುದೇ ಅವರ ಕೆಲಸ. ನರೇಂದ್ರ ಮೋದಿ, ಬಿಜೆಪಿ, ಆರ್.ಎಸ್.ಎಸ್ ಗಾಂಧಿ ಮತ್ತು ನೆಹರೂ ಅವರನ್ನು ಹೀಯಾಳಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ ಎಂದರು.

Tags:

error: Content is protected !!