ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದ ಬಳಿ ಇರುವ ಜೆಮ್ ಸಕ್ಕರೆ ಕಾರ್ಖಾನೆಯು ಆರಂಭಗೊಂಡ ಸುದ್ದಿ ತಿಳಿಯುತ್ತಿದ್ದಂತೆ, ನ್ಯಾಯಯುತ ಬೆಲೆಗಾಗಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ಮುಧೋಳದ ಕಬ್ಬು ಬೆಳೆಗಾರರು ‘ಜೆಮ್ ಫ್ಯಾಕ್ಟರಿ ಚಲೋ’ ಹೋರಾಟ ಆರಂಭಿಸಿದರು.
ಮುಧೋಳದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೈಕ್‌ಗಳ ಮೂಲಕ ಕಾರ್ಖಾನೆಯತ್ತ ನುಗ್ಗಿದ ನೂರಾರು ರೈತರು, ಕಾರ್ಖಾನೆಯ ಒಳಗೆ ಪ್ರವೇಶಿಸಲು ಯತ್ನಿಸಿದರು. ಈ ವೇಳೆ ಪರಿಸ್ಥಿತಿ ತೀರಾ ಬಿಗುವಿನಿಂದ ಕೂಡಿತ್ತು. ಆಕ್ರೋಶಗೊಂಡ ರೈತರು ತಮ್ಮ ಕಬ್ಬಿನ ಟ್ರ್ಯಾಕ್ಟರ್‌ಗಳನ್ನು ಕಾರ್ಖಾನೆ ಒಳಗೆ ಕಳುಹಿಸಲು ಬಿಡದೆ, ಹೊರಗೆ ಕಳುಹಿಸುವಂತೆ ಪಟ್ಟು ಹಿಡಿದರು.
ರೈತರನ್ನು ತಡೆಯಲು ಸ್ಥಳದಲ್ಲಿದ್ದ ಪೊಲೀಸ್ ಪಡೆ ಹರಸಾಹಸ ಪಡಬೇಕಾಯಿತು. ರೈತರು ಕಾರ್ಖಾನೆ ಒಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಮತ್ತು ರೈತರ ನಡುವೆ ತೀವ್ರ ತಳ್ಳಾಟ ಮತ್ತು ನೂಕಾಟ ನಡೆಯಿತು.
ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ರೈತರು ಜಿಲ್ಲಾ ವರಿಷ್ಠಾಧಿಕಾರಿ (ಎಸ್ಪಿ), ಹೆಚ್ಚುವರಿ ಎಸ್ಪಿ, ಮತ್ತು ಡಿವೈಎಸ್ಪಿಗಳನ್ನೇ ತಳ್ಳಾಡಿ, ಪೊಲೀಸರ ನಿಯಂತ್ರಣವನ್ನು ಮೀರಿ ಕಾರ್ಖಾನೆ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದರು. ಕಬ್ಬಿಗೆ ನ್ಯಾಯಯುತ ಬೆಲೆ ಸಿಗುವವರೆಗೂ ತಮ್ಮ ಹೋರಾಟ ನಿಲ್ಲದು ಎಂದು ಪಟ್ಟು ಹಿಡಿದಿರುವ ಮುಧೋಳ ರೈತರ ಈ ಆಕ್ರಮಣಕಾರಿ ನಡೆಯಿಂದಾಗಿ ಬೀಳಗಿ ತಾಲೂಕಿನ ಜೆಮ್ ಕಾರ್ಖಾನೆ ಬಳಿ ಭಾರೀ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

