

ಸರ್ಕಾರ ಈಗಷ್ಟೇ 3300 ರೂಪಾಯಿ ಪ್ರತಿಟನ್’ಗೆ ಬೆಂಬಲ ಬೆಲೆ ನೀಡಲು ಮುಂದಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ಹಾನಿಯಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕಲಭಾವಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಕಿತ್ತೂರು ತಾಲೂಕಿನ ಕಲಭಾವಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಚೇತನ ಸೋಮನಟ್ಟಿ ಮತ್ತು ಗೋಪಾಲ ಸೋಮನಟ್ಟಿ ಎಂಬ ರೈತರಿಗೆ ಸೇರಿದ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಒಂದೆಡೇ ಕಬ್ಬಿಗೆ ಸರ್ಕಾರ ಈಗಷ್ಟೇ 3300 ರೂಪಾಯಿ ಪ್ರತಿಟನ್’ಗೆ ಬೆಂಬಲ ಬೆಲೆ ನೀಡಲು ಮುಂದಾಗಿದೆ. ಇಂತಹದ್ದರಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಬೆಂಕಿ ತಗುಲುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಯು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿ ಮತ್ತಷ್ಟು ವ್ಯಾಪಿಸದಂತೆ ನಿಯಂತ್ರಿಸಿದ್ದಾರೆ. ಸಕಾಲದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಪ್ರವೃತ್ತರಾದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಈ ಘಟನೆಯು ದೊಡ್ಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಗ್ನಿ ಅವಘಡದ ಕಾರಣ ಮತ್ತು ಹಾನಿಯ ಕುರಿತು ತನಿಖೆ ನಡೆಯುತ್ತಿದೆ.

