ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಶಾಸಕರಾದ ಲಕ್ಷ್ಮಣ ಸವದಿ ಬೆಂಬಲಿಗ ಮಲ್ಲಿಕಜಾನ್ ನದಾಫ್ ಶಾಸಕ ರಾಜು ಕಾಗೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈಗ ಅವರು ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ.
ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕರಾದ ಲಕ್ಷ್ಮಣ ಸವದಿ ಮತ್ತು ರಾಜು ಕಾಗೆ ‘ಜೋಡೆತ್ತುಗಳಂತೆ’ ನಾಮಪತ್ರ ಸಲ್ಲಿಸಿದ್ದರೂ, ಕಾಗೆ ಅವಿರೋಧವಾಗಿ ಆಯ್ಕೆಯಾದ ನಂತರ ಸವದಿಯಿಂದ ಅಂತರ ಕಾಯ್ದುಕೊಂಡಿದ್ದರು. ಈ ಬೆಳವಣಿಗೆಯಿಂದ ಕೋಪಗೊಂಡಿದ್ದ ಸವದಿ ಅಭಿಮಾನಿ ಮಲ್ಲಿಕಜಾನ್ ನದಾಫ್ ಅವರು ಶಾಸಕ ರಾಜು ಕಾಗೆ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ, ನದಾಫ್ ಅವರು ಈ ಕುರಿತು ಶುಕ್ರವಾರ ವಿಡಿಯೋ ಬಿಡುಗಡೆ ಮಾಡಿದ್ದು, “ಶಾಸಕ ಲಕ್ಷ್ಮಣ ಸವದಿ ಅವರ ಅಭಿಮಾನದ ಮೇಲೆ ನಾನು ಶಾಸಕ ರಾಜು ಕಾಗೆ ಅವರಿಗೆ ಕರೆ ಮಾಡಿದ್ದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ” ಎಂದು ಹೇಳುವ ಮೂಲಕ ತಮ್ಮ ಮಾತಿಗೆ ಕ್ಷಮೆಯಾಚಿಸಿದ್ದಾರೆ.

