ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗಳಾದ ಭೂಷಣ ರಾಮಕೃಷ್ಣ ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲ ರಾಕೇಶ ಕಿಶೋರನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಚಂದ್ರಕಾಂತ ಕಾದ್ರೋಳ್ಳಿ ಬಣ ಆಗ್ರಹಿಸಿದೆ.
ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿಯ ಚಂದ್ರಕಾಂತ ಕಾದ್ರೋಳಿ ಬಣವು ಅಧ್ಯಕ್ಷ ಶ್ರೀಕಾಂತ ಮಾದರ ನೇತೃತ್ವದ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಸುಪ್ರೀಂ ಕೋರ್ಟ್ನ ಗೌರವಾನ್ವಿತ ನ್ಯಾಯಮೂರ್ತಿ ಭೂಷಣ ರಾಮಕೃಷ್ಣ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಎಂಬುವವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಅವರನ್ನು ಭಾರತದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದೆ. ಇತ್ತೀಚೆಗೆ, ಅಂದರೆ ಅಕ್ಟೋಬರ್ 06, 2025 ರ ಸೋಮವಾರದಂದು, ವಿಷ್ಣು ಮೂರ್ತಿ ಭಗ್ನ ಪ್ರಕರಣದ ತೀರ್ಪು ನೀಡುವಾಗ, ನ್ಯಾಯಮೂರ್ತಿ ಗವಾಯಿ ಅವರು “ಇದು ನ್ಯಾಯಾಲಯಕ್ಕೆ ಸಂಬಂಧಿಸಿದ್ದಲ್ಲ, ನೀವು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಗೆ ಅರ್ಜಿ ಸಲ್ಲಿಸಿ” ಎಂದು ಕಾನೂನುಬದ್ಧ ತೀರ್ಪು ನೀಡಿದ್ದರು. ಈ ನ್ಯಾಯಸಮ್ಮತ ನಿಲುವನ್ನು ಸಹಿಸದೆ, ವಕೀಲ ರಾಕೇಶ್ ಕಿಶೋರ್ ನ್ಯಾಯಾಲಯದ ಘನತೆ ಮತ್ತು ಸಂವಿಧಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಭಾರತ ದೇಶದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಒಪ್ಪದ ಅನೇಕ ದೇಶದ್ರೋಹಿಗಳು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ, ಇಂತಹ ದೇಶದ್ರೋಹಿಗಳ ವಿರುದ್ಧ ಪ್ರತಿ ರಾಜ್ಯದಲ್ಲಿ ಆಯಾ ಮುಖ್ಯಮಂತ್ರಿಗಳು ಪ್ರಕರಣ ದಾಖಲಿಸಲು ಆದೇಶ ನೀಡಬೇಕು. ಈ ಸಂಬಂಧ ರಾಷ್ಟ್ರಪತಿಗಳು ಹಾಗೂ ಗೌರವಾನ್ವಿತ ಪ್ರಧಾನಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ. ಕಾನೂನು ಮತ್ತು ಸಂವಿಧಾನದ ಗೌರವವನ್ನು ಎತ್ತಿಹಿಡಿಯುವ ಹಾಗೂ ದೇಶದ್ರೋಹ ಕೃತ್ಯಗಳನ್ನು ಸಹಿಸದಿರುವ ಕಠಿಣ ಕ್ರಮ ಕೈಗೊಳ್ಳಲು ಈ ಸಂದರ್ಭದಲ್ಲಿ ಸಂಘಟನೆಯು ಆಗ್ರಹಿಸಿತು.
ಈ ಸಂದರ್ಭದಲ್ಲಿ ಬಸವರಾಜ್ ಕಟ್ಟಿಮನಿ, ಮಹಾಲಿಂಗ ಗಗ್ಗರಿ, ಬಾಳವ್ವ ಹರಿಜನ, ಹಣಮವ್ವ ಮರೆಣ್ಣವರ, ಲಕ್ಷ್ಮೀ ಕಿಳ್ಳೆ, ನೀಲವ್ವ ಧೂಳಾಯಿ, ಮೀಲಿಂದ್ ಐಹೊಳೆ ಚಾಂದಬೀಬೀ ನದಾಫ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.