ಅಪರಿಚಿತ ವಾಹನ ಡಿಕ್ಕಿ ಹಿನ್ನೆಲೆ ಅಪಘಾತದಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮೊದಲು ಅಪಘಾತವೆಂದು ಬಿಂಬಿಸಿದ್ದ ಪ್ರಕರಣದ ತನಿಖೆ ನಡೆಸಿದಾಗ ಅದು ಅಪಘಾತವಲ್ಲ ಉದ್ಧೇಶಿತ ಕೊಲೆ ಎಂಬುದು ಸಾಭೀತಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮಧುರಖಂಡಿ ಕ್ರಾಸನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರ ಸಾವನ್ನಪ್ಪಿದ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದೆ. ಇದು ಆಕಸ್ಮಿಕ ಅಪಘಾತವಲ್ಲ, ಬದಲಾಗಿ ಉದ್ದೇಶಪೂರ್ವಕ ಕೊಲೆ ಎಂದು ಜಿಲ್ಲಾ ಎಸ್ಪಿ ಸಿದ್ಧಾರ್ಥ್ ಗೋಯಲ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಮೃತಪಟ್ಟವರನ್ನು ಬಸವರಾಜ ಕಾನಗೊಂಡ (40) ಎಂದು ಗುರುತಿಸಲಾಗಿದ್ದು, ಅವರು ಪಡಿತರ ಅಕ್ಕಿ ಕಳ್ಳಸಾಗಣೆ ಮಾಫಿಯಾಕ್ಕೆ ಬಲಿಯಾಗಿದ್ದಾರೆ. ಅಕ್ರಮ ಅಕ್ಕಿ ಡೀಲ್‌ನಲ್ಲಿ ‘ಮಂಥ್ಲಿ ಕಮಿಷನ್’ ವಿಚಾರವಾಗಿ ಮಾತುಕತೆ ಕುದುರದೆ ಜಗಳವಾದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ. ಜಮಖಂಡಿ ತಾಲ್ಲೂಕಿನ ಮಧುರಖಂಡಿ ಕ್ರಾಸ್ ಬಳಿ ಅಕ್ಟೋಬರ್ 8 ರಂದು ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಕ್ಕಿ ಸ್ಮಗ್ಲರ್ ಅಷ್ಪಾಕ್ ಮುಲ್ಲಾ ಮತ್ತು ಆತನ ಸಹಚರರು ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದ ಮೂಲಕ ಬಸವರಾಜ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾರೆ. ಆರಂಭದಲ್ಲಿ ಇದು ಅಪಘಾತ ಎಂದು ಕಂಡುಬಂದರೂ, ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರ ತನಿಖೆಯಿಂದ ಇದು ಕೊಲೆ ಎಂಬ ಸತ್ಯ ಬೆಳಕಿಗೆ ಬಂದಿದೆ.
ರಬಕವಿಯ ಮಹಿಷವಾಡಗಿ ಸೇತುವೆ ಬಳಿ ಅಕ್ಕಿ ದಂಧೆಕೋರರ ಜೊತೆ ಬಸವರಾಜ ಕಾನಗೊಂಡ ಅವರು ‘ಕಮಿಷನ್ ಡೀಲ್’ ಕುರಿತು ಮಾತುಕತೆ ನಡೆಸಿದ್ದರು. ಆದರೆ, ಡೀಲ್ ಬಗೆಹರಿಯದೆ ಜಗಳ ನಡೆದು ಅಷ್ಪಾಕ್ ಅಲ್ಲಿಂದ ಎದ್ದು ಹೋಗಿದ್ದ. ನಂತರ ಮಧ್ಯಸ್ಥಿಕೆ ವಹಿಸಿದ್ದವರೊಂದಿಗೆ ಪಾರ್ಟಿ ಮುಗಿಸಿ, ಬಸವರಾಜ ಅವರು ಮಧುರಖಂಡಿ ಮಾರ್ಗವಾಗಿ ಜಮಖಂಡಿಗೆ ವಾಪಸ್ ಬರುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಈ ಕೊಲೆಯಲ್ಲಿ ಅಕ್ಕಿ ಸ್ಮಗ್ಲರ್ ಅಷ್ಪಾಕ್ ಮುಲ್ಲಾ, ಆತನ ಸಹಚರರಾದ ನಂದೇಶ್ವರ ಪವಾಡಿ, ಮಹೇಶ್ ಪವಾಡಿ, ಮತ್ತು ಅಷ್ಪಾಕ್ ಸಹೋದರ ಯೂಸುಪ್ ಮುಲ್ಲಾ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿ ಕಾರ್ಯಚರಣೆ ನಡೆಸಿ, ಕೊಲೆ ಆರೋಪಿಗಳಾದ ಅಷ್ಪಾಕ್ ಮುಲ್ಲಾ ಮತ್ತು ಆತನ ಮೂವರು ಸಹಚರರನ್ನು ಬಂಧಿಸಿದ್ದಾರೆ.
ಈ ಮೂಲಕ ಅಕ್ಕಿ ಮಾಫಿಯಾದ ಈ ಜಾಲವನ್ನು ಭೇದಿಸಿದ ಪೊಲೀಸರ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.